ಬೆಂಗಳೂರು, ನ 17(SM): ಅಧಿಕಾರ ಸ್ವೀಕರಿಸುವ ಸಂದರ್ಭ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ರಾಜ್ಯದ ರೈತರ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರೈತರ ಮೊಗದಲ್ಲಿ ಹರ್ಷ ಮೂಡಿಸಿದ್ದ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಇದೀಗ ರೈತರಿಗೆ ಮತ್ತೊಂದು ಸಿಹಿ ನೀಡಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ 'ಫಸಲ್ ಭೀಮಾ ಯೋಜನೆ' ಸರಿಯಾಗಿ ಜಾರಿಯಾಗದಿರುವ ಕಾರಣ ರಾಜ್ಯ ಸರ್ಕಾರವೇ ಹೊಸದೊಂದು, ಸರಳವಾದ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ.
ಕೇಂದ್ರದ ಫಸಲ್ ಭೀಮಾ ಯೋಜನೆ ಬಗ್ಗೆ ಈಗಾಗಲೇ ಮಹಾರಾಷ್ಟ್ರ, ಮಧ್ಯ ಪ್ರದೇಶಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇತ್ತೀಚೆಗಷ್ಟೆ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು ಫಸಲ್ ಭೀಮಾ ಯೋಜನೆ ದೊಡ್ಡ ಹಗರಣ ಎಂದು ಸಹ ಕರೆದಿದ್ದರು.
ಈ ಎಲ್ಲಾ ಗೊಂದಲಗಳ ನಡುವೆ ರಾಜ್ಯ ಸರ್ಕಾರ ಬೆಳೆ ವಿಮೆ ಜಾರಿಗೆ ತರಲು ಸಿದ್ಧವಾಗಿದೆ. ಈ ಬಗ್ಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ನೀಲನಕ್ಷೆ ತಯಾರಾಗಿದ್ದು ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಯೋಜನೆ ಜಾರಿ ಆದರೆ ರೈತರಿಗೆ ಕಡಿಮೆ ಹಣದಲ್ಲಿ ಬೆಳೆ ವಿಮೆ ದೊರಕಲಿದೆ. ಬೆಳೆ ನಾಶವಾದರೂ ರೈತ ಕಂಗಾಲಾಗುವುದು ಇದರಿಂದ ತಪ್ಪಲಿದೆ. ಅಲ್ಲದೆ ರೈತರಲ್ಲಿರುವಂತಹ ಆತಂಕ ಕೂಡ ಈ ಯೋಜನೆಯಿಂದ ದೂರವಾಗಲಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ಕುಮಾರಸ್ವಾಮಿ ಅವರು ಭತ್ತಕ್ಕೆ ಬೆಂಬಲ ಘೋಷಿಸಿದ್ದರು. ಇದರಿಂದ ಲಕ್ಷಾಂತರ ರೈತರಿಗೆ ಲಾಭವಾಗಲಿದೆ. ಭತ್ತಕ್ಕೆ ಬೆಂಬಲ ಬೆಲೆ ನೀಡಬೇಕು ಎಂಬುದು ಬಹುದಿನದ ಬೇಡಿಕೆ ಆಗಿತ್ತು.