ಕಾರ್ಕಳ, ನ.01 (DaijiworldNews/PY): "ಅತೀ ಪುರಾತನ ಇತಿಹಾಸ ಹೊಂದಿರುವ ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿ, ಸಂಸ್ಕಾರ, ಕಲೆ, ಧಾರ್ಮಿಕತೆ, ಜಾತ್ಯತೀತ ಪರಂಪರೆ ಜೊತೆಗೆ ಜೀವನ ಪದ್ಧತಿಯೂ ಹೊಂದಿದೆ. ಕನ್ನಡ ಸಮ್ರಾಜ್ಯ ವಿಸ್ತಾರ ಹೊಂದಿದ್ದರೂ ಕರ್ನಾಟಕ ರಾಜ್ಯವು ಒಂದು ಚೌಕಟ್ಟಿನಲ್ಲಿದೆ ಇದೆ. ತನ್ಮೂಲಕ ಕನ್ನಡ ಪರಂಪರೆ ಬೆಳೆಗುತ್ತಾ ಸಾಗಲಿ" ಎಂದು ತಹಶೀಲ್ದಾರ್ ಕೆ.ಪುರಂದರ ಹೇಳಿದರು.
ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು, ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದರು.
"ದ್ರಾವಿಡ ಭಾಷೆಗಳಲ್ಲಿ ಅತೀ ಪ್ರಾಚೀನ ಹಾಗೂ ಶಾಸ್ತೀಯ ಭಾಷೆ ಎಂಬ ಹೆಗ್ಗಳಿಕೆ ಮತ್ತು ಸ್ಥಾನ ಪಡೆದ ಭಾಷೆ ನಮ್ಮ ಕನ್ನಡ. ಪ್ರಾಚೀನ ಕಾವ್ಯಗಳು ಶಾಸನಗಳು, ಜನಪದ ಭಾಷೆಗಳಲ್ಲಿ ಕೊಂಡಾಡಲ್ಪಟ್ಟ ಕನ್ನಡ ಭಾಷೆ ಜನಮಾನಸದ ನಡುವೆ ಸಂಪದ್ಬರಿತವಾಗಿ ಬೆಳೆದು ನಿಂತಿದೆ ಎಂದರು. ಕನ್ನಡ ನಾಡು, ಸಂಸ್ಕೃತಿಯಲ್ಲಿ ನಾವು ಬೀಗುತ್ತಿದ್ದರೂ ಜತೆಗೆ ಕನ್ನಡದ ವೈಭವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದೇವೆ. ಶುದ್ದ ಕನ್ನಡದ ಹುಡುಕಾಟದಲ್ಲಿದ್ದೇವೆ. ಶಿಕ್ಷಣ ಮಾಧ್ಯಮದ ಗೊಂದಲದಲ್ಲಿದ್ದೇವೆ ಎನ್ನುತ್ತಾ ಕನ್ನಡ ನಿತ್ಯೋತ್ಸವ ನಮ್ಮೆಲ್ಲರ ಆಶಯವಾಗಲಿ" ಎಂದರು.
ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಕಾರ್ಕಳ ಪೊಲೀಸ್ ಉಪಾಧೀಕ್ಷಕ ಎಸ್ ವಿಜಯ ಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್,ಕಾರ್ಕಳ ನಗರ ಠಾಣಾಧಿಕಾರಿ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಹೆಬ್ರಿ ಠಾಣಾಧಿಕಾರಿ ಮಹೇಶ್, ಉಪ ತಹಶಿಲ್ದಾರ್ ಮಂಜುನಾಥ್ ನಾಯಕ್, ಪುರಸಭೆ ಸದಸ್ಯರು, ತಾಲೂಕು ಕಚೇರಿ, ಪಂಚಾಯತ್ ಪಂಚಾಯತ್, ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೊಲೀಸ್ ಹಾಗೂ ಗೃಹರಕ್ಷದ ದಳದ ಆಕರ್ಷಕ ಪಥಸಂಚಲನ ನಡೆಯಿತು. ನಗರ ಠಾಣೆ ಎಸ್ಐ ಪಥಸಂಚಲನದ ನೇತೃತ್ವ ವಹಿಸಿ ನಡೆಸಿಕೊಟ್ಟರು. ಸಂಜಯ್ಕುಮಾರ್ ನಿರೂಪಿಸಿದರು.
ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಅನಂತಶಯನದಲ್ಲಿ ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಜಂಟಿಯಾಗಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಆರತಿ ಬೆಳಗಿ ಚಾಲನೆ ನೀಡಿದರು.
ಅನಂತಶಯನದಿಂದ ನಗರದ ರಾಜಮಾರ್ಗದಲ್ಲಿ ಕಾರ್ಕಳ ಬಸ್ ನಿಲ್ದಾಣ, ಮೂರು ಮಾರ್ಗ, ರಥಬೀದಿ ಮೂಲಕ ಗಾಂಧಿ ಮೈದಾನಕ್ಕೆ ಸಾಗಿ ಬಂತು. ಭುವನೇಶ್ವರಿ ರಥದ ಜತೆಗೆ ಕಾರ್ಕಳ ಪುರಸಭೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವಿವಿಧ ಕಾಲೇಜುಗಳ ವೈವಿಧ್ಯಮಯ ಕನ್ನಡ ನಾಡು ನುಡಿಯ ಸಂದೇಶ ಸಾರುವ ಸ್ತಬ್ಧಚಿತ್ರಗಳು ರಂಗು ನೀಡಿದವು.
ಕೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಶಾಲೆ, ಎಸ್ವಿಟಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಪ್ರೌಢಶಾಲೆ ಕಾರ್ಕಳ, ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆ, ಪೆರ್ವಾಜೆ ಪ್ರಾಥಮಿಕ ಶಾಲೆ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಸ.ಪ.ಪೂ.ಕಾಲೇಜು ಕಾರ್ಕಳ, ಎಸ್ಎನ್ವಿ ಪ್ರೌಢಶಾಲೆ ಹಿರಿಯಂಗಡಿ, ನೇತಾಜಿ ಸುಭಾಶ್ಚಂದ್ರ ಬೋಸ್ ಸ್ಕೌಟ್ ದಳ ಮತ್ತು ರಾಣಿ ಅಬ್ಬಕ್ಕ ಗೈಡ್ ದಳ, ಪೆರ್ವಾಜೆ ಪ್ರೌಢಶಾಲೆಯ ರೆಡ್ಕ್ರಾಸ್ ಸಂಸ್ಥೆ ಮತ್ತು ಜೂನಿಯರ್ 10 ರೆಡ್ಕ್ರಾಸ್ ಘಟಕ, ಪೆರ್ವಾಜೆ ಪ್ರೌಢಶಾಲೆಯ ಹಳೆವಿದ್ಯಾರ್ಥಿಗಳ ಚೆಂಡೆ ಕಲಾ ತಂಡ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಕಾರ್ಕಳ ಇವರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
"ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ಇದೆ. ತನ್ನದೇಯಾದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಪಡೆದುಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ, ಭಾಷೆಯಾಗಿ ಉಳಿಯದೇ ನಡೆ, ನುಡಿ, ಸಂಸ್ಕೃತಿಯಲ್ಲಿ ಅದು ಬಿಂಬಿತವಾಗಬೇಕು. ಇಂಗ್ಲಿಷ್ ಮೆದುಳಿನ ಭಾಷೆಯಾಗಿದ್ದರೆ ಕನ್ನಡ ಹೃದಯದ ಭಾಷೆಯಾಗಿದೆ" ಎಂದು ಶಿಕ್ಷಕ, ಬಿ. ರಾಜೇಂದ್ರ ಭಟ್ ಹೇಳಿದರು.
ಕಾರ್ಕಳ ತಾಲೂಕು ಆಡಳಿತವು ಮಂಜುನಾಥ ಪೈ ಸಭಾಭವನದಲ್ಲಿ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಾತನಾಡಿದರು.
ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, "ಕನ್ನಡ ಭಾಷೆ ಅದರದೇ ಆದ ಪರಂಪರೆ ಇದೆ. ಕನ್ನಡ ಭಾಷೆಯಲ್ಲಿ ಹೆತ್ತವರನ್ನು ಕರೆಯುವುದು ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿಸುವುದಕ್ಕೆ ಸರಿಸಮಾನವಾಗುತ್ತದೆ. ಎಲ್ಲೇ ಇರಿ ಕನ್ನಡ ಭಾಷೆಯನ್ನು ಸಂಬಾಷಿಸಿ ದೊಡ್ಡತನ ಪ್ರದರ್ಶಿಸಬೇಕು" ಎಂದರು.
ಪುರಸಭೆ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಕಾರ್ಕಳ ಪೊಲೀಸ್ ಉಪಾಧೀಕ್ಷಕ ಎಸ್ ವಿಜಯ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಉಪಸ್ಥಿತರಿದ್ದರು.