ಅಹಮದಾಬಾದ್, ನ17(SS): ಜಗತ್ತಿನ ಅತೀ ಎತ್ತರದ ಸರ್ದಾರ್ ವಲ್ಲಭಭಾಯಿ ಅವರ ಏಕತಾ ಪ್ರತಿಮೆಗೆ ಸುಗಮ ಸಂಪರ್ಕ ಕಲ್ಪಿಸಲು ಗುಜರಾತ್ ಸರ್ಕಾರ ಸಕಲ ವ್ಯವಸ್ಥೆ ಮಾಡುತ್ತಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಕಚೇರಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಗುಜರಾತ್ ಸಮೀಪದ ಕೆವಾಡಿಯ ಎಂಬಲ್ಲಿನ ನರ್ಮದಾ ನದಿ ತೀರದಲ್ಲಿ ಅನಾವರಣಗೊಂಡಿರುವ ಪ್ರತಿಮೆಗೆ ಹತ್ತಿರವಾಗಿ ವಿಮಾನ ನಿಲ್ದಾಣ ನಿರ್ಮಿಸಲು ಮತ್ತು ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಮತ್ತು ರೈಲ್ವೆ ಮಂಡಳಿಯ ಅಧಿಕಾರಿಗಳೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ.
ಸರ್ದಾರ್ ವಲಭಭಾಯಿ ಪ್ರತಿಮೆ ಇರುವ ಕೆವಾಡಿಯ ಗ್ರಾಮದಿಂದ ರಾಜ್ಪಿಪ್ಲಾ 23 ಕಿ.ಮೀ. ದೂರದಲ್ಲಿದೆ. ಹೀಗಾಗಿ ನರ್ಮಾದಾ ಜಿಲ್ಲೆಯ ರಾಜ್ಪಿಪ್ಲಾ ಎಂಬಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಮೂಲಕ ಪ್ರತಿಮೆಗೆ ಸುಗಮ ಸಂಪರ್ಕ ಕಲ್ಪಿಸಲಾಗುವುದು ಎಂದು ವಿಜಯ್ ರೂಪಾನಿ ಹೇಳಿದ್ದಾರೆ.
ಇದೇ ವೇಳೆ ರೈಲ್ವೆ ಮಂಡಳಿಯೊಂದಿಗೂ ಸಭೆ ನಡೆಸಿದ್ದು, ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಪ್ರತಿಮೆ ಇರುವ ಕೆವಾಡಿಯ ವರೆಗೂ ರೈಲು ಮಾರ್ಗ ನಿರ್ಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.