ಮಂಗಳೂರು, ನ17(SS): ಮೊಬೈಲ್ ಟವರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರಿಂದ ಬಹಳಷ್ಟು ದೂರು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಪಷ್ಟ ನೀತಿ ರೂಪಿಸಲಾಗುವುದೆಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಅಧ್ಯಕ್ಷ್ಜತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಜನವಸತಿ ಪ್ರದೇಶಗಳ ಬಳಿ ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಚರ್ಚೆ ನಡೆಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ಡ್ರಾಪ್ಟ್ ಸಿದ್ದವಾಗಿದೆ ಎಂದು ತಿಳಿಸಿದರು.
ಸದ್ಯದಲ್ಲಿಯೇ ಈ ಬಗ್ಗೆ ಅಂತಿಮ ಸಭೆ ನಡೆಸಿ ನೋಟಿಫೀಕೇಶನ್ ಹೊರಡಿಸಲಾಗುವುದು. ಈಗ ಇರುವ ಎಲ್ಲಾ ಟವರ್ ಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಸಮಸ್ಯೆ ಆಗುತ್ತಿರುವ ಟವರ್ ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್ ಟವರ್ ನಿರ್ಮಾಣದ ಸ್ಪಷ್ಟ ನೀತಿ ಬಂದ ಬಳಿಕ ಈ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಕ್ರಮ ಮರಳು ದಂಧೆಯಲ್ಲಿ ವಶಕ್ಕೆ ಪಡೆದ ಲಾರಿಗಳನ್ನು ವಾಪಾಸ್ ಕೊಡಿಸುವ ವಿಚಾರವಾಗಿ ಮಾತನಾಡಿದ ಅವರು, ಪೊಲೀಸರು ಮತ್ತು ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಪೊಲೀಸರು ವಶಕ್ಕೆ ಪಡೆದ ಲಾರಿಗಳಿಗೆ ತುಕ್ಕು ಹಿಡಿದಿದ್ದು, ಸುಖಾಸುಮ್ಮನೆ ಹಾಳಾಗುತ್ತಿದೆ. ಹೀಗಾಗಿ ಪೊಲೀಸರು ವಶಕ್ಕೆ ಪಡೆದ ಲಾರಿಗಳನ್ನು ಅದರ ಮಾಲಕರಿಗೆ ವಾಪಾಸ್ ಕೊಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.