ಕಾಸರಗೋಡು, ಅ. 31 (DaijiworldNews/SM): ನವೆಂಬರ್ 1ರಿಂದ ಕೇರಳದಲ್ಲಿ ಶಾಲೆ ಪುನರಾರಂಭಗೊಳ್ಳಲಿದೆ. ಕೋವಿಡ್ ಮಾರ್ಗಸೂಚಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿದೆ. ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳು ಕಾತರದಲ್ಲಿದ್ದಾರೆ.
ಕೊರೋನಾ ಕಾರಣದಿಂದಾಗಿ ದೇಶದೆಲ್ಲೆಡೆ ತರಗತಿಗಳು ಕದ ಮುಚ್ಚಿದ್ದವು. ಅದರಲ್ಲೂ ಕರ್ನಾಟಕದಲ್ಲಿ ಈಗಾಗಲೇ ಶಾಲೆಗಳು ಆರಂಭಗೊಂಡಿದೆ. ಈ ನಡುವೆ ಕೇರಳದಲ್ಲಿ ಸೋಂಕು ಅಲ್ಪ ನಿಯಂತ್ರಣಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತರಗತಿಗಳನ್ನು ಶುರುಮಾಡಲು ಕೇರಳ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಒಂದರಿಂದ ಏಳು ಮತ್ತು ಹತ್ತನೇ ತರಗತಿ ನವಂಬರ್ ಒಂದರಿಂದ ಆರಂಭಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. 8 ಮತ್ತು 9ನೇ ತರಗತಿಗಳು ನವಂಬರ್ 15 ರಿಂದ ಆರಂಭಗೊಳ್ಳಲಿವೆ. ಮೊದಲ 15 ದಿನಗಳ ಕಾಲ ಮಧ್ಯಾಹ್ನ ತನಕ ತರಗತಿ ನಡೆಯಲಿವೆ. ಒಂದು ಬಾರಿ 50 ಶೇಕಡಾ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರಲಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ಉಲ್ಲೇಖಿಸಲಾಗಿದೆ.