ಕಾರ್ಕಳ, ಅ.31 (DaijiworldNews/PY): "ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಗೌರವಿಸುವ ಪರಿಪಾಠವನ್ನು ಪತ್ರಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರ, ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರಿಗೆ ಪ್ರಮುಖ್ಯತೆಯನ್ನು ನೀಡಿದೆ. ಆಸ್ತಿ, ಅಂತಸ್ತುಗಳಿಗಿಂತ ಮಾನವೀಯ ಮೌಲ್ಯಗಳು ಶೇಷ್ಠವಾಗಿದೆ. ತನ್ಮೂಲಕ ವೃದ್ಧಾಶ್ರಮಕ್ಕೆ ಮುಕ್ತಿದೊರಕಲಿದೆ" ಎಂದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸುಬ್ರಹ್ಮಣ್ಯ ಜೆ.ಎನ್ ಹೇಳಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯಾವಾದಿಗಳ ಸಂಘ, ಕಾರ್ಕಳ ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಕಾರ್ಕಳ, ತಾಲೂಕು ಆರೋಗ್ಯ ಇಲಾಖೆ, ತಾಲೂಕು ನಿವೃತ್ತ ನೌಕರರ ಸಂಘದ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.
"ನಾವು ಬೆಳೆಸಿದ ಬೆಳೆಯು ನಮ್ಮ ಬದುಕಿಗೆ ಪ್ರಯೋಜನವಾಗಬೇಕೇ ಹೊರತು ಬೆಳೆಯು ನಮ್ಮ ಬದುಕನ್ನೇ ತಿನ್ನಬಾರದು. ತಮ್ಮ ವೃತ್ತಿ ಜೀವನದಲ್ಲಿ ನಡೆದಿರುವ ಕೆಲವೊಂದು ಘಟನಾವಳಿಗಳನ್ನು ನೆನಪಿಕೊಂಡು ಹಿರಿಯರು ದೇವರಿಗೆ ಸಮಾನರು. ಅವರ ಆಶೀರ್ವಾದವೇ ಶ್ರೀ ರಕ್ಷೆಯಾಗಿದೆ" ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಥಿಕಾರದ ಸದಸ್ಯರಾದ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, "ದೇಶದ ಕಾನೂನು ಎಲ್ಲಾ ನಾಗರಿಕರಿಗೆ ಸಮಾನವಾಗಿದೆ. ಕಾನೂನು ಅರಿತಿಲ್ಲ ಎಂದರೆ ಅದಕ್ಕೆ ಕ್ಷಮೆ ಇಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಯು ಕಾನೂನು ಅರಿತುಕೊಂಡಾಗ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕಾನೂನು ಅರಿತುಕೊಂಡಾಗ ದೈನಂದಿನ ಚಟುವಟಿಕೆ ಹಾಗೂ ಜೀವನ ಸಾಗಿಸಲು ಸುಗಮವಾಗುತ್ತದೆ" ಎಂದರು.
ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸನತ್ಕುಮಾರ್ ಜೈನ್ ಅಧ್ಯಕ್ಷತೆವಹಿಸಿದರು.
ಪ್ಯಾನೆಲ್ ವಕೀಲ ಸುದೇಶ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ರೂಪಾಶ್ರೀ , ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಚೇತನಾ ಎಸ್.ಎಫ್, ಸಹಾಯಕ ಸರ್ಕಾರಿ ಅಭಿಯೋಜನಕರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ ಶೋಭಾ ಎಂ.ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಟಿ.ಎಲ್, ಡಿವೈಎಸ್ಪಿ ವಿಜಯಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಪಾಲ್ಗೊಂಡರು.
ಹಿರಿಯ ನಾಗರಿಕರ ಸಂಘದ ಕಾರ್ಯಧ್ಯಕ್ಷ ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಸುಮತಿ ಪ್ರಾರ್ಥಿಸಿದರು. ಎಂ.ಸಿ ಆಚಾರ್ ನಿರೂಪಿಸಿದರು. ಕಾರ್ಕಳ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಾಸುದೇವ ರಾವ್ ವಂದಿಸಿದರು.