ಕಾಸರಗೋಡು, ಅ.31 (DaijiworldNews/PY): ಕೇರಳದಲ್ಲಿ ಕೊರೊನಾ ಹಿನ್ನಲೆಯಲ್ಲಿ ಮುಚ್ಚುಗಡೆಗೊಂಡ ಶಾಲೆಗಳು 18 ತಿಂಗಳ ಬಳಿಕ ನವೆಂಬರ್ 1ರಿಂದ ಪುನರಾರಂಭಗೊಳ್ಳಲಿದೆ. ಕೊರೊನಾ ಮಾರ್ಗಸೂಚಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಸಿದ್ದತೆಗಳು ಪೂರ್ಣಗೊಂಡಿದೆ.
1-7 ಮತ್ತು 10ನೇ ತರಗತಿ ನವೆಂಬರ್ 1ರಿಂದ ಹಾಗೂ 8 ಮತ್ತು 9ನೇ ತರಗತಿಗಳು ನವೆಂಬರ್ 15 ರಿಂದ ಆರಂಭಗೊಳ್ಳಲಿದೆ.
ಮೊದಲ 15 ದಿನ ಮಧ್ಯಾಹ್ನ ತನಕ ತರಗತಿ ನಡೆಯಲಿದೆ. ಬೆಳಿಗ್ಗೆ 9ರಿಂದ 10 ಗಂಟೆಯ ನಡುವೆ ತರಗತಿ ಆರಂಭವಾಗಲಿದ್ದು, 1 ಗಂಟೆ ತನಕ ತರಗತಿ ನಡೆಯಲಿದೆ. ಒಂದು ಬಾರಿ ಶೇ.50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದಕ್ಕಾಗಿ ಎರಡು ಬ್ಯಾಚ್ಗಳನ್ನು ಮಾಡಲಾಗಿದೆ. ಮೊದಲ ಬ್ಯಾಚ್ನ ತರಗತಿ ಸೋಮವಾರದಿಂದ ಹಾಗೂ ಬುಧವಾರ ಹಾಗೂ ಎರಡನೇ ಬ್ಯಾಚ್ನ ತರಗತಿ ಗುರುವಾರದಿಂದ ಶನಿವಾರ ತನಕ ನಡೆಯಲಿದೆ.
ವಿದ್ಯಾರ್ಥಿಗಳು ಶಾಲೆಗೆ ತಲುಪಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ವಾಹನ ಚಾಲಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಇದಲ್ಲದೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.