ಉಡುಪಿ, ನ17(SS): ಮಂಗಳೂರಿನ ಆರ್ಎಸ್ಎಸ್ ಬೈಠಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯಾಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಉದ್ದೇಶಪೂರ್ವಕವಾದ ಸುಳ್ಳುಸುದ್ದಿಯಾಗಿದೆ. ಈ ಬಗ್ಗೆ ಎಲ್ಲೆಡೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿದೆ. ಇದನ್ನು ಯಾರೋ ಉದ್ದೇಶ ಪೂರ್ವಕವಾಗಿ ಹುಟ್ಟು ಹಾಕಿದ್ದಾರೆ. ಸುಳ್ಳು ಸುದ್ದಿ ಇದಾಗಿದೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು ಮಾಹಿತಿಯಿಂದಾಗಿದೆ. ಬಿಜೆಪಿಯನ್ನು ಅಭದ್ರಗಿಳಿಸಲು ಯಾರೋ ಮಾಡುತ್ತಿರುವ ಯತ್ನ ಮತ್ತು ಷಡ್ಯಂತ್ರ ಇದು. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವಾಗ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗಳು ಆಗಲ್ಲ. ಆರ್ಎಸ್ಎಸ್ ಬೈಠಕ್ ನಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದರು.
ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ ನಿರಂತರ ನಡೆಯುತ್ತಿದೆ. ಸಾಲಮನ್ನಾ ಘೋಷಣೆಯಾಗಿದ್ದು, ಇನ್ನೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯ ಸರ್ಕಾರ ಹುಟ್ಟಿದ ತಕ್ಷಣ ಸತ್ತಿದೆ ಎಂದು ಕಿಡಿ ಕಾರಿದ್ದಾರೆ.