ಮಂಗಳೂರು, ಅ.28 (DaijiworldNews/PY): ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಂಬೆ ರೇಚಕ ಸ್ಥಾವರ ಉನ್ನತೀಕರಣಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಗುರುವಾರ ತುಂಬೆ ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದು, ಕಾಮಗಾರಿ ತ್ವರಿತವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಯು ತುರ್ತಾಗಿ ಪೂರ್ಣಗೊಳ್ಳುತ್ತಿದ್ದು, ಅ.29ರಂದು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಭಾಗಶ: ಪಡೀಲ್, ಶಕ್ತಿನಗರ, ಮಂಗಳಾದೇವಿ, ಮೋರ್ಗನ್ಸ್ ಗೇಟ್, ಪಾಂಡೇಶ್ವರ, ಲೇಡಿಹಿಲ್ ಹಾಗೂ ಬಿಜೈ ಕದ್ರಿ ಪ್ರದೇಶಗಳಿಗೆ ಮಧ್ಯಾಹ್ನದ ನಂತರ ನೀರು ಪೂರೈಕೆ ಮಾಡಲಾಗುವುದು ಎಂದು ಮೇಯರ್ ಅವರ ಪ್ರಕಟಣೆ ತಿಳಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಂಬೆ ರೇಚಕ ಸ್ಥಾವರವನ್ನು ಉನ್ನತೀಕರಣಗೊಳಿಸುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರಕಿದ್ದು. ಈ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸರಿಸುಮಾರು 30-40 ದಿನಗಳ ಕಾಲಾವಕಾಶದ ಅವಶ್ಯಕತೆಯಿದೆ. ಆ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ, ಆ ಅಡಚಣೆಯನ್ನು ತಪ್ಪಿಸುವ ಸಲುವಾಗಿ ಈಗಿರುವಂತಹ ಹೆಚ್ಚುವರಿ ಸ್ಟಾಂಡ್ ಬೈ ಪಂಪ್ಗಳನ್ನು ಉಪಯೋಗಿಸುವ ನಿಟ್ಟಿನಲ್ಲಿ ಅದಕ್ಕೆ ಬೇಕಿರುವ ಕೊಳವೆ ಜೋಡಣೆಯ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಈ ಕುರಿತು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.