ತಿರುವನಂತಪುರ, ನ 16 (MSP):ಶುಕ್ರವಾರದಂದು ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗುವುದು. ಅದಕ್ಕೆ ಪೂರಕವಾಗಿ ಹಲವು ಬೆಳವಣಿಗೆಗಳೂ ನಡೆಯುತ್ತಿದ್ದು, ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲೆಂದೇ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶುಕ್ರವಾರ ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ, ಆದರೆ ಕೊಚ್ಚಿಯಲ್ಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿಯೂ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ವಿಮಾನ ನಿಲ್ದಾಣದಿಂದಲೇ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಪುಣೆಯಿಂದ ಹೊರಟಿರುವ ತೃಪ್ತಿ ದೇಸಾಯಿ ಮತ್ತವರ ತಂಡ ಇಂದು ಮುಂಜಾನೆ ಸುಮಾರು 4.30ಕ್ಕೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ ಆದಾಗಲೇ ಪ್ರತಿಭಟನಾಕಾರರು ಅಲ್ಲಿ ಸೇರಿದ್ದು, ಆಕೆಯನ್ನು ವಿಮಾನ ನಿಲ್ದಾಣದಿಂದ ಒಂದು ಹೆಜ್ಜೆಯೂ ಹೊರಗಡಿ ಇಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.
ಈ ನಡುವೆ ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನ ಪಡೆಯದೇ ಮಹಾರಾಷ್ಟ್ರಕ್ಕೆ ವಾಪಸ್ ತೆರಳುವುದಿಲ್ಲ ಎಂದು ತೃಪ್ತಿ ದೇಸಾಯಿ ಸ್ಪಷ್ಟಪಡಿಸಿದ್ದಾರೆ. ನಮಗೆ ಹಲವು ಬೆದರಿಕೆ ಕರೆಗಳು ಬರುತ್ತಿದೆ, ಹೀಗಾಗಿ ನಮ್ಮ ಮೇಲೆ ದಾಳಿ ಆಗುವುದನ್ನು ನಿರಾಕರಿಸುವಂತಿಲ್ಲ. ಸರ್ಕಾರ ನಮಗೆ ಭದ್ರತೆ ನೀಡಿದರೂ , ನೀಡದೇ ಇದ್ದರೂ ನಾವು ಅಯ್ಯಪ್ಪ ಸನ್ನಿಧಾನಕ್ಕೆ ತಲುಪುತ್ತೇವೆ ಎಂದಿದ್ದಾರೆ. ಇನ್ನೂ ತೃಪ್ತಿ ದೇಸಾಯಿ ಶವರಿಮಲೆಗೆ ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರು, ಏನೇ ಆದರೂ ತೃಪ್ತಿ ದೇಸಾಯಿಯನ್ನು ಶಬರಿಮಲೆ ಹೋಗಲು ಬಿಡವುದಿಲ್ಲ. ಆಕೆ ಬೇಕಿದ್ದರೆ ತಮ್ಮ ಸ್ವಂತ ವಾಹನದಲ್ಲಿ ಅಥವಾ ಪೊಲೀಸ್ ವಾಹನದಲ್ಲಿ ತೆರಳಲಿ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.