ಮಂಗಳೂರು, ಅ15 : ಆಂಗ್ಲ ಸಾಪ್ತಾಹಿಕ ದಾಯ್ಜಿ ವರ್ಲ್ಡ್ ವೀಕ್ಲಿಗೆ ಎಂಟನೆ ವರ್ಷದ ಸಂಭ್ರಮ. ಇದರ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ಅದ್ಧೂರಿ ಕಾರ್ಯಕ್ರಮ ಶನಿವಾರ ಸಂಜೆ ಆಚರಿಸಲಾಯಿತು. ಇದೇ ಸಂದರ್ಭ ಭಿನ್ನಸಾಮರ್ಥ್ಯದ ವಿಶೇಷ ಸಾಧಕರಿಗೆ ‘ಸ್ವಾಭಿಮಾನ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ೮ನೇ ವರ್ಷಾಚರಣೆಯ ಅಂಗವಾಗಿ ದಾಯ್ಜಿವರ್ಲ್ಡ್ ವೀಕ್ಲಿ ಹೊರತಂದಿರುವ ಆರೋಗ್ಯದ ಕುರಿತಾದ ವಿಶೇಷ ಸಂಚಿಕೆಯನ್ನು ಪದ್ಮಭೂಷಣ ಬಿ ಎಮ್ ಹೆಗ್ಡೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ವಿಶೇಷ ಸಾಧನೆ ಮಾಡಿರುವ ಭಿನ್ನ ಸಾಮಾರ್ಥ್ಯದ ವ್ಯಕ್ತಿಗಳನ್ನು ಗುರುತಿಸಿ ನೀಡಲಾಗುತ್ತಿರುವ ಈ ಪ್ರಶಸ್ತಿ ಇನ್ನಷ್ಟು ಜನರಿಗೆ ಸಾಧನೆ ಮಾಡಲು ಪ್ರೇರೇಪಿಸಲಿದೆ ಎಂದರು. ಇನ್ನು ಇದೇ ವೇಳೆ ಮಾತನಾಡಿದ ಮಂಗಳೂರಿನ ಪಾಧರ್ ಮುಲ್ಲರ್ ಚಾರಿಟೇಬಲ್ ಇನ್’ಸ್ಟಿಟ್ಯೂಶನ್ಸ್ ನಿರ್ದೇಶಕ ರಿಚಾರ್ಡ್ ಕುವೆಲೊ, ಈಗಾಗಲೇ ಆಸ್ಪತ್ರೆ ಹಾಗೂ ಕಟ್ಟಡ ಮಾಲಕರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದ್ದು, ವಿಶೇಷ ಚೇತನರು ಸುಲಭವಾಗಿ ಓಡಾಡುವಂತೆ ಕಟ್ಟಡವನ್ನು ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಈ ಬಗ್ಗೆ ಸರ್ಕಾರವೂ ಗಮನಹರಿಸಬೇಕು ಎಂದರು. ಆ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಅಂಗವೈಕಲ್ಯತೆಯನ್ನೂ ಮೆಟ್ಟಿ ವಿಶೇಷ ಸಾಧನೆ ಮಾಡಿರುವ ಅರ್ಜುನ್ ಅಡ್ಯಂತಾಯ , ಆಶ್ಲಿ ಡಿಸೋಜಾ , ಪ್ರಮೀಳಾ ಜೋಯ್ಸ್ ಪಿಂಟೊ, ಸಿಲೆಸ್ತಿನ್ ಮೇಬಲ್ ರೊಡ್ರಿಗಸ್ , ಕೃಷ್ಣ ಭಟ್ , ಪ್ರಜ್ವಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಾನಿಧ್ಯ ಭಿನ್ನ ಚೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮೆಚ್ಚುಗೆ ಗಳಿಸಿತು.