ಮಂಗಳೂರು, ಅ. 27 (DaijiworldNews/SM): 2 ಸಾವಿರ ರೂ. ಕೋಟಾ ನೋಟು ಚಲಾವಣೆ ಎನ್ನುವ ನೋಟೀಸ್ ಒಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ಇದರಿಂದಾಗಿ ಗೊಂದಲಕ್ಕೀಡಾಗಿದ್ದರು. ಆದರೆ, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ ಬಿಐ ಉನ್ನತಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ದೈಜಿವರ್ಲ್ಡ್ ಗೆ ಎಸ್ ಬಿಐ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಲ್ಲಿ ಸುಳ್ಳು ಸಂದೇಶ ರವಾನೆ ಮಾಡಲಾಗಿದೆ. ನೋಟಿನಲ್ಲಿ 2ಎಕ್ಯೂ ಬಿಎಸಿ ಸಂಖ್ಯೆ ನೋಟು ಎಂದು ನಮೂದಿಸಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಸಿಕ್ಕಿದೆ.
2009ರಲ್ಲಿ 1 ಸಾವಿರ ರೂ. ನಕಲಿ ನೋಟ್ ಬಂದಿದೆ ಎಂದು ಸುದ್ದಿಯಾಗಿತ್ತು. ಬಳಿಕ 2017 ರಲ್ಲಿಯೂ ಈ ರೀತಿಯ ಸುಳ್ಳು ಸುದ್ದಿ ರವಾನೆಯಾಗಿತ್ತು. ಮತ್ತೆ 2 ಸಾವಿರ ರೂ. ನೋಟಿನ ಸಿರಿಯಾಲ್ ನಂಬರ್ ಹಾಕಿ ಸುಳ್ಳು ಸುದ್ದಿ ಹಬ್ಬಿಸಲಾಗಿದ್ದು, ಸಾರ್ವಜನಿಕರು ಗೊಂದಲಕ್ಕೀಡಾಗದಂತೆ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.