ಉಡುಪಿ, ಅ.26 (DaijiworldNews/HR): ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಅವಧಿಯನ್ನು ಹೊರತು ಪಡಿಸಿ ಉಳಿದ ಅವಧಿಯಲ್ಲಿ ಬಾಡಿಗೆಯನ್ನು ಬಾಕಿ ಉಳಿಸಿಕೊಂಡ 12 ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳು ಇಂದು ಬೀಗ ಜಡಿದು ಜಪ್ತಿ ಮಾಡಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆಗೆ ಸಂಬಂಧಿಸಿದ ವಾಣಿಜ್ಯ ಕಟ್ಟಡದಲ್ಲಿರುವ ಹಲವು ಅಂಗಡಿಗಳು ಬಾಡಿಗೆ ಹಣ ಪಾವತಿಸದೆ ಲಕ್ಷಾಂತರ ರೂ. ಬಾಕಿ ಇರಿಸಿಕೊಂಡಿದ್ದು, ಕೆಲವು ಕಟ್ಟಡದ ಒಳಗೊಳಗೆ ಅಂಗಡಿಗಳನ್ನು ಮಾಡಿಕೊಂಡು ನಗರಸಭೆಗೆ ಬಾಡಿಗೆ ನೀಡದೆ ವ್ಯವಹಾರ ನಡೆಸುತ್ತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ಇಳಿದಿತ್ತು.
ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ನಗರಸಭೆ ಅಧಿಕಾರಿಗಳು, ಅಕ್ಟೋಬರ್ 25 ಮತ್ತು 26ರಂದು ಕಾರ್ಯಾಚರಣೆ ನಡೆಸಿ, ಒಂದು ಲಕ್ಷಾಂತರ ರೂ ಬಾಕಿ ಇರಿಸಿರುವ ಅಂಗಡಿಗಳ ವಿರುದ್ಧ ಕ್ರಮ ಜರಗಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಬಾಡಿಗೆ ಬಾಕಿ ಇರಿಸಿಕೊಂಡ ಅಂಗಡಿಗಳಿಗೆ ಬೀಗ ಹಾಕಿಸಲಾಗಿದೆ. ಈ ಕಾರ್ಯಾಚರಣೆ ಮುಂದಿನ ದಿನದಲ್ಲಿ ತೀವ್ರವಾಗಿ ಮಾಡಲಾಗುತ್ತದೆ. ಬಾಡಿಗೆ ಪಾವತಿಗೆ ಬಾಕಿ ಇರುವವರು ತತ್ಕ್ಷಣ ಬಾಕಿ ಬಾಡಿಗೆ ಮೊತ್ತ ಪಾವತಿಸಬೇಕು. ಅಂಗಡಿಯಲ್ಲಿ ಒಳಬಾಡಿಗೆ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಗರಸಭೆ ಕಂದಾಯಾಧಿಕಾರಿ ಧನಂಜಯ ತಿಳಿಸಿದರು.