ಚಿಕ್ಕಬಳ್ಳಾಪುರ, ನ 15(SM): ಮೂರು ವರ್ಷದ ಕಂದಮ್ಮನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅವುಲನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಐಶ್ವರ್ಯ(26) ಹಾಗೂ 3 ವರ್ಷದ ಪ್ರಣೀತಾ ಮೃತರು. ನಾಲ್ಕು ವರ್ಷಗಳ ಹಿಂದೆ ಮಂಜುನಾಥ್ ಜೊತೆ ಐಶ್ವರ್ಯ ಮದುವೆಯಾಗಿದ್ದರು. ಮಂಜುನಾಥ್ ಹೈದರಾಬಾದ್ ನ ಪ್ರಿಂಟಿಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ. ಈ ಕಾರಣದಿಂದಾಗಿ ದಂಪತಿ ಹೈದರಾಬಾದ್ ನಲ್ಲಿ ನೆಲೆಸಿತ್ತು. 3 ದಿನಗಳ ಹಿಂದೆ ತವರು ಮನೆಗೆ ತನ್ನ ಮಗುವಿನ ಜೊತೆ ಬಂದ ಐಶ್ವರ್ಯ ಗುರುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತವರೂರಿನಲ್ಲಿರುವ ವೆಂಕಟರೆಡ್ಡಿ ಎಂಬವರ ಎಂಬವರ ತೋಟದಲ್ಲಿನ ಬಾವಿಗೆ ತನ್ನ ಮಗುವಿನ ಜೊತೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಬಾವಿ ಬಳಿ ಇದ್ದ ಚಪ್ಪಲಿಯಿಂದಾಗಿ ಆತ್ಮಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಗುಡಿಬಂಡೆ ಪೊಲೀಸರಿಗೆ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನ ಬಾವಿಯಿಂದ ಹೊರತೆಗೆದಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.