ಬೆಂಗಳೂರು, ನ 15(SM): ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿತ್ತು ಎನ್ನುವ ವಿಚಾರ ಇದೀಗ ಬಹಿರಂಗಗೊಳ್ಳುತ್ತಿದೆ.
ಇತ್ತೀಚಿಗೆ ನಡೆದ ಲೋಕಸಭೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದಂತಹ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ನಿರೀಕ್ಷೆಯ ಪ್ರತಿಫಲ ಪಡೆಯಲು ವಿಫಲವಾಗಿತ್ತು. ಈ ಎಲ್ಲಾ ವಿಚಾರಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಬಿಜೆಪಿ ಪಕ್ಷವನ್ನು ದಕ್ಷಿಣದ ಭಾರತದಲ್ಲಿ ಬಲವರ್ಧನೆಗೆ ಪಕ್ಷದ ಹಿರಿಯ ನಾಯಕರು ಮುಂದಾಗಿದ್ದಾರೆ. ಈಗಾಗಲೇ ಉತ್ತರದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕರ್ನಾಟಕ ಮಾತ್ರ ಬಿಜೆಪಿಗೆ ಬಿಸಿ ತುಪ್ಪವಾಗುತ್ತಿದೆ.
ಪಕ್ಷ ಬಲವರ್ಧನೆಯಾಗುತ್ತಿದ್ದಂತೆ ಒಂದಲ್ಲ ಒಂದು ಕಂಟಕಗಳು ಬಿಜೆಪಿಗೆ ಕರ್ನಾಟಕದಲ್ಲಿ ಎದುರಾಗುತ್ತಿದೆ. ಇದು ೨೦೧೯ರ ಲೋಕಸಭಾ ಚುನಾವಣೆಗೆ ತೀವ್ರವಾದ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿಯ ಚಾಣಾಕ್ಷ್ಯ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿ ಆರ್ ಎಸ್ ಎಸ್ ಬೈಠಕ್ ಗಳಲ್ಲಿ ಭಾಗವಹಿಸಿ ಚರ್ಚಿಸಿದ್ದಾರೆ. ಆರ್ ಎಸ್ ಎಸ್ ಬೈಠಕ್ ನಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳಲ್ಲಿ ಮುಂದಿನ ಲೋಕಸಭಾ ಚುನಾವಣೆಯ ವಿಷಯ ಕೂಡ ಒಂದಾಗಿತ್ತು ಒಂದು ಮೂಲಗಳಿಂದ ತಿಳಿದು ಬಂದಿದೆ.
ಈ ಸಂದರ್ಭದಲ್ಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬದಲಾಯಿಸಲು ಅಮಿತ್ ಶಾ ಒಲವು ಹೊಂದಿದ್ದರು. ಹಾಗೂ ಆ ವಿಚಾರವನ್ನು ಆರ್ ಎಸ್ ಎಲ್ ಮುಖಂಡರೊಂದಿಗೂ ಚರ್ಚಿಸಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಬದಲಾಗಿ ಯುವ ನಾಯಕರ ಹೆಗಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡುವ ನಿರ್ಧಾರಕ್ಕೆ ಅಮಿತ್ ಶಾ ಬಂದಿದ್ದರು ಎನ್ನಲಾಗಿದೆ. ಅದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ ಹಾಗೂ ಆರ್ ಅಶೋಕ ಹೆಸರುಗಳು ಮುಂಚೂಣಿಯಲ್ಲಿದ್ದವು.
ಆದರೆ, ರಾಜ್ಯಾಧ್ಯಕ್ಷ ಸ್ಥಾನವನ್ನು ಬದಲಾಯಿಸುವ ವಿಚಾರಕ್ಕೆ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬಾರದು, ಅವರನ್ನೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಪಕ್ಷದ ನಾಯಕರು, ಸದಸ್ಯರ ವಿರೋಧವೇ ಬಿಎಸ್ ವೈಗೆ ವರದಾನವಾಯಿತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಮುಂದಿನ ಲೋಕಸಭೆ ಚುನಾವಣೆ ತನಕ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸೂಚಿಸಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.