ಮಂಗಳೂರು, ಅ. 25 (DaijiworldNews/SM): ವಿ.ಎಚ್.ಪಿ ಮತ್ತು ಬಜರಂಗದಳ ತ್ರಿಶೂಲ ದೀಕ್ಷೆಯ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಪುಂಡಾಟಿಕೆಗೆ ಮುಂದಾದರೆ ಸಂವಿಧಾನ ಉಳಿಸಲು ಎಸ್.ಡಿ.ಪಿ.ಐ ಗೆ ಹೋರಾಟ ಅನಿವಾರ್ಯವಾಗಲಿಗೆ ಎಂದು ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಬಿ.ಆರ್ ಬಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.
ಎಸ್.ಡಿ.ಪಿ.ಐ ದ.ಕ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ “ ಸಂವಿಧಾನ ದೀಕ್ಷೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಆಯುಧಪೂಜೆ ಸಂದರ್ಭದಲ್ಲಿ ವಿ.ಎಚ್.ಪಿ ಮತ್ತು ಬಜರಂಗದಳ ಸಂಘಟನೆ ತನ್ನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿತ್ತು. ಸಂಘಪರಿವಾರ ಹಂಚಿದ ತ್ರಿಶೂಲದ ಷಡ್ಯಂತ್ರಕ್ಕೆ ಬಲಿಯಾಗಿ ಹಿಂದುಳಿದ ವರ್ಗ, ದಲಿತ, ಬಿಲ್ಲವ, ಬಂಟ ಸಮುದಾಯದ ಯುವಕರು ತಮ್ಮ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ರಾಹ್ಮಣರು ಉನ್ನತ ಹುದ್ದೆಯನ್ನು ಅಲಂಕರಿಸಿ ಅತ್ಯುತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ. ಇದನ್ನು ಹಿಂದುಳಿದವರು, ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಸ್ಕರ್ ಪ್ರಸಾದ್ ಮಾರ್ಮಿಕವಾಗಿ ನುಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ರಿಯೆ –ಪ್ರತಿಕ್ರಿಯೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಭಾಸ್ಕರ್ ಪ್ರಸಾದ್, ಕ್ರಿಯೆ – ಪ್ರತಿಕ್ರಿಯೆಗೆ ಸಾರ್ವಜನಿಕರು ಇಳಿದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಹೋಗಬಹುದು. ಕಾನೂನನ್ನು ಕಾಪಾಡುವ ಬಗ್ಗೆ ಹೇಳಿಕೆ ನೀಡಬೇಕಾದ ಬಸವರಾಜ ಬೊಮ್ಮಾಯಿ, ಗೌರವಾನ್ವಿತ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗ ಗೌರವಯುತವಾಗಿ, ಘನತೆಯಿಂದ ನಡೆದುಕೊಳ್ಳಬೇಕು. ಅದು ಆಗದಿದ್ದರೆ ಮುಖ್ಯಮಂತ್ರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಸಂಘಟನೆ ಬೇಕಾದರೂ ಸೇರಿ ಇಂತಹ ಹೇಳಿಕೆ ನೀಡಲಿ ಎಂದು ಹೇಳಿದರು.