ಮಂಗಳೂರು, ನ 15(MSP): ಮಾಜಿ ಸಚಿವ ರಮಾನಾಥ ರೈ ಅವರು ನೀಡಿದ ಹೇಳಿಕೆಗಳಿಂದ ರೈ ಅವರು ಜಿಹಾದಿ ಸಂಸ್ಕೃತಿಯಲ್ಲಿದ್ದಾರೆ ಎನ್ನುವ ಅನುಮಾನ ಕಾಡತೊಡಗುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ’ನಳಿನ್ ಇದ್ದು ಸತ್ತ ಹಾಗೆ, ಶವಸಂಸ್ಕಾರ ಮಾತ್ರ ಬಾಕಿ’ ಎಂದು ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಅವರು ನ.15 ರ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ , ರಮಾನಾಥ ರೈ ಅವರಿಗೆ ಟಿಪ್ಪು ಸುಲ್ತಾನ್ ಈಗ ರೋಲ್ ಮಾಡೆಲ್ ಆಗಿರಬಹುದು. ಅದ್ದರಿಂದಲೇ ಮಾಜಿ ಸಚಿವರು ಈ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶವ ಸಂಸ್ಕಾರ ನೋಡಬೇಕು ಎಂದು ಇಂಗಿತ ವ್ಯಕ್ತಪಡಿಸುವ ಮನೋಸ್ಥಿತಿ ನಿಜಕ್ಕೂ ಆತಂಕಕಾರಿ. ರೈ ಅವರು ಈ ಹಿಂದೆ ಸಾಕಷ್ಟೂ ಹಿಂದೂ ಮತ್ತು ಮುಸ್ಲಿಂ ಯುವಕರ ಶವ ಸಂಸ್ಕಾರ ನೋಡಿದ್ದಾರೆ, ಆದರೆ ಮತ್ತೆ ಶವ ಸಂಸ್ಕಾರ ನೋಡುವ ಆಸೆ ಇವರಿಗೆ ಯಾಕೆ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಸಚಿವರು, ಶಾಸಕರು ಸಾವಿನಲ್ಲಿ ಸಂಭ್ರಮಿಸುವ ಕಾಲಘಟ್ಟದಲ್ಲಿದ್ದಾರೆ. ಅಧಿಕಾರ ಇಲ್ಲದಿದ್ದರೂ, ರೈ ಅವರು ಸರಕಾರಿ ಅಧಿಕಾರಿಗಳನ್ನು ಹಿಡಿದು ಧಿಮಾಕು ತೋರಿಸುತ್ತಿದ್ದಾರೆ. ರೈ ಅವರ ಜಿಹಾದಿ ಮನೋಸ್ಥಿತಿಯನ್ನು ನೋಡಿ ಜನತೆಯೇ ಅವರನ್ನು ಮನೆಗೆ ಕಳುಹಿಸಿದ್ದಾರೆ. ಸದ್ಯ ರೈ ಅವರು ಕಾಂಗ್ರೆಸ್ ನಲ್ಲಿ ಸಕ್ಕರೆ ಇಲ್ಲದ ಚಹದಂತಾಗಿದ್ದಾರೆ. ಇದು ರಮಾನಾಥ ರೈ ಅವರಿಗೆ ರಾಜಕೀಯದ ಕೊನೆಯ ಕಾಲಘಟ್ಟ ಎಂದು ವ್ಯಂಗ್ಯವಾಡಿದರು.
ವಿಜಯಾ ಬ್ಯಾಂಕ್ ವಿಲೀನಕ್ಕೆ ಸಹಿ ಹಾಕಿದ್ದು ಮನಮೋಹನ್ ಸಿಂಗ್ ಎಂದು ತಿಳಿಯದೇ? ಇಲ್ಲೇ ರಮಾನಾಥ ರೈ ಅವರು ಶತದಡ್ಡ ಎನ್ನುವುದು ಗೊತ್ತಾಗುತ್ತದೆ. ನಿಮಗೆ ತಾಕತ್ತಿದ್ರೆ ಮನಮೋಹನ್ ಸಿಂಗ್ ಅವರ ಮೇಜು ಕುಟ್ಟಿ ಪ್ರಶ್ನಿಸಿ. ಒಂದು ವೇಳೆ ಸಂಸದ ನಳಿನ್ ವಿರುದ್ಧ ಮಾತಾಡಿದ್ರೆನೀವು ಹೋದೆಡೆ ಬಂದೆಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್ ಎಚ್ಚರಿಕೆ ನೀಡಿದರು.