ಮಂಗಳೂರು,ನ 15(MSP): ಕೇಂದ್ರ ಸಚಿವ ಅನಂತಕುಮಾರ್ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗುವ ಆತಂಕದಲ್ಲಿರುವ ಪಕ್ಷದ ವರಿಷ್ಠರು ರಾಜ್ಯದ ಪ್ರಭಾವಿ ಸಂಸದರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ಕುಮಾರ್ ಕಟೀಲು ಅವರಿಗೆ ಇಲ್ಲವೇ ಪ್ರಹ್ಲಾದ್ ಜೋಷಿ ಅವರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಬಂದ ವೇಳೆ ಸಂಘ, ಪಕ್ಷ ನಿಷ್ಠರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎನ್ನುವ ಸಲಹೆಯನ್ನು ಆರ್ಎಸ್ಎಸ್ ನಾಯಕರು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಬದಲಾವಣೆ ಮಾಡಿದ್ದೇ ಆದಲ್ಲಿ ಪಕ್ಷ ಮುನ್ನಡೆಸಲು ಜಾತಿ, ಮಾಸ್ ಆಗಿ ಹುಡುಕಾಟ ನಡೆಸದೇ ಸಂಘದ ಜೊತೆ ಚೆನ್ನಾಗಿ ಸಂಬಂಧ ಹೊಂದಿರುವ ವ್ಯಕ್ತಿಯನ್ನು ನೇಮಿಸಿ ಎನ್ನುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಅಮಿತ್ ಶಾ ಅವರು ಕೂಡಾ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಇನ್ನು ಆರೆಸ್ಸೆಸ್ ನೀಡಿದ ಪಟ್ಟಿಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಮಂಗಳೂರಿನ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಹೆಸರಿದೆ ಎಂದು ತಿಳಿದುಬಂದಿದ್ದು, ರಾಜ್ಯದಲ್ಲಿ ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆ ಆದರೂ ಕೂದಾ ಅದು ಲೋಕಸಭಾ ಚುನಾವಣೆಯ ಬಳಿಕೆ ಎಂದಿದ್ದಾರೆ.