ಮಂಗಳೂರು,ಅ.25 (DaijiworldNews/HR): 1ರಿಂದ 5ನೇ ತರಗತಿವರೆಗಿನ ಶಾಲೆಗಳು ಇಂದಿನಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಮರಳಿದ್ದಾರೆ. ಜಿಲ್ಲೆಯಲ್ಲಿಯೂ ಕೊರೊನಾ ಪಾಸಿಟಿವಿಟಿ ದರವು ತುಂಬಾ ಕಡಿಮೆಯಾಗಿರುವುದರಿಂದ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ಮಂಗಳೂರು
ಉಡುಪಿ
ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆದಾಗ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೀರಸವಾಗಿರುವುದನ್ನು ಗಮನಿಸಿದ ಅಧಿಕಾರಿಗಳು ಈಗಿನಿಂದಲೇ ತರಗತಿಗಳನ್ನು ತೆಗೆದುಕೊಳ್ಳುವ ಬದಲು ಆರಂಭದಲ್ಲಿ ಒಂದು ವಾರದವರೆಗೆ ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ಅಧಿಕಾರಿಗಳು ಶಾಲೆಗಳಿಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ 1 ರಿಂದ 5 ನೇ ತರಗತಿಯಲ್ಲಿ ಓದುತ್ತಿರುವ 1,57,562 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲಿದ್ದು, ವಾರಕ್ಕೆ ಮೂರು ದಿನಗಳವರೆಗೆ ಪರ್ಯಾಯ ದಿನಗಳಲ್ಲಿ ತರಗತಿಗಳು ನಡೆಯುತ್ತವೆ. ನವೆಂಬರ್ 2 ರಿಂದ ತರಗತಿಗಳು ನಿಯಮಿತವಾಗಿ ನಡೆಯಲಿದೆ.
ಈ ಕುರಿತು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಮಾತನಾಡಿ, ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ನಿರೀಕ್ಷೆಯಿದೆ. ಆದಾಗ್ಯೂ ಆನ್ಲೈನ್ ಶಿಕ್ಷಣವನ್ನು ಪಡೆಯಲು ಬಯಸುವವರಿಗಾಗಿ ಆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಇಂದು 220 ಸರಕಾರಿ ಶಾಲೆಗಳು, ಆರು ಅನುದಾನಿತ, 15 ಅನುದಾನರಹಿತ ಹಾಗೂ ಎಂಟು ಶಾಲೆಗಳನ್ನು ವಿದ್ಯಾರ್ಥಿಗಳಿಗಾಗಿ ತೆರೆಯಲಾಗುತ್ತಿದ್ದು, ಶಿಕ್ಷಕರು ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ ಹಾಜರಾತಿ ಉತ್ತಮವಾಗಿದೆ ಎಂದು ವರದಿಯಾಗಿದೆ.
ಶಾಲೆಗಳ ಪುನರಾರಂಭದ ಪೂರ್ವಭಾವಿ ಸಿದ್ಧತೆಯಲ್ಲಿ ಶಿಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಭಾಗಿತ್ವದಲ್ಲಿ ಪೋಷಕರ ಸಭೆ ನಡೆಸಿ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್ ಎಸ್ ನಾಗೂರ್ ಮಾತನಾಡಿ, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತರಗತಿಗಳನ್ನು ತೆರೆಯಲಾಗುವುದು ಮತ್ತು ಆನ್ಲೈನ್ ತರಗತಿಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ಎರಡುವರೆ ವರ್ಷಗಳಿಂದ ಸರಕಾರದಿಂದ ಸಮವಸ್ತ್ರ ವಿತರಣೆ ಯಾಗದೆ ಹಳೆಯ ಸಮವಸ್ತ್ರ ವನ್ನೇ ಧರಿಸುತ್ತಿದ್ದಾರೆ. ಕೆಲವು ಪೋಷಕರು ತಾವೆ ಬಟ್ಟೆ ತೆಗೆದುಕೊಂಡು ಮಕ್ಕಳಿಗೆ ಹೊಲಿಸಿ ಕೊಡುತ್ತಿದ್ದಾರೆ.