ಸುಬ್ರಹ್ಮಣ್ಯ, ನ 15(MSP): ಮೀನು ಹಿಡಿಯಲೆಂದು ಕುಮಾರಧಾರಾ ನದಿಗೆ ಇಳಿದಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ದಗನಕಜೆ ಎಂಬಲ್ಲಿ ನಡೆದಿದೆ. ನೀರುಪಾಲಾದವರನ್ನು ದೇವಚಳ್ಳ ಗ್ರಾಮದ ದೇವರಕಾಡು ನಿವಾಸಿಗಳಾದ ದೇವಚಳ್ಳ ಗ್ರಾಮದ ದೇವಕಾಡು ಹೊನ್ನಪ್ಪರ ಪುತ್ರ ಲತೀಶ್ ಮತ್ತು ಎಲ್ಯಣ್ಣ ಎಂಬವರ ಪುತ್ರ ರಕ್ಷಿತ್ ಎಂದು ಗುರುತಿಸಲಾಗಿದೆ.
ರಕ್ಷಿತ್ ಮತ್ತು ಲತೀಶ್ ಇತರ ಮೂವರು ಸ್ನೇಹಿತರೊಂದಿಗೆ ದಗನಕಜೆ ಎಂಬಲ್ಲಿ ಕುಮಾರಧಾರಾ ನದಿಯಿಂದ ಮೀನು ಹಿಡಿಯಲು ತೆರಳಿದ್ದರು. ಬೆಳಗ್ಗೆ ತೆರಳಿದ್ದ ಈ ಐವರು ಸಂಜೆಯವರೆಗೂ ಅಲ್ಲೇ ಇದ್ದರೆನ್ನಲಾಗಿದೆ. ಸಂಜೆಯ ವೇಳೆ ಹಿಂದಿರುಗುವ ಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ಓರ್ವ ಕಾಲುಜಾರಿ ನೀರಿಗೆ ಬಿದ್ದನೆನ್ನಲಾಗಿದೆ. ಅವನನ್ನು ರಕ್ಷಿಸುವ ಭರದಲ್ಲಿ ಇನ್ನೋರ್ವ ಕೂಡಾ ಆತನೊಂದಿಗೆ ನೀರುಪಾಲಾದ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿದ್ದು, ನದಿಯಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.