ಉಡುಪಿ, ನ 15(MSP): ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣ ಮಾಡಲು ಪೂರಕವಾದ ವಾತಾವರಣವಿದ್ದು, ಪ್ರತಿಯೊಬ್ಬರು ಉದಾಸೀನ ಮಾಡದೆ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.ವಿಶ್ವ ಹಿಂದೂ ಪರಿಷದ್ ವತಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿ.2 ರಂದು ನಡೆಯುವ ಜನಾಗ್ರಹ ಸಭೆಯ ಕಾರ್ಯಾಲಯವನ್ನು ಉಡುಪಿ ಕೃಷ್ಣ ಮಠದ ಯಾತ್ರಿನಿವಾಸದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸೀತಾಪಹರಣ ವೇಳೆ ರಾವಣ ವಿರುದ್ಧ ಯುದ್ಧ ಮಾಡಲು ನೇರವಾಗಿ ತಮಿಳುನಾಡಿನ ಮೂಲಕ ಲಂಕೆಗೆ ಹೋಗಬಹುದಿತ್ತು. ಆದರೆ ರಾಮ ದೇವರು ಕರ್ನಾಟಕದ ಮೂಲಕ ಹೋಗಿದ್ದರು. ಹಾಗಾಗಿ ರಾಮಮಂದಿರ ನಿರ್ಮಾಣದಲ್ಲಿ ಕರ್ನಾಟಕದವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.ರಾಮ ದೇವರ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬ ಆಸೆ ಪ್ರತಿಯೊಬ್ಬರಿಗೆ ಇದೆ. ಆದರೆ ಅದನ್ನು ಯಾವ ರೀತಿಯಾಗಿ ಸಂಸತ್ತಿಗೆ ಮುಟ್ಟಿಸಬೇಕೆಂದು ತಿಳಿದಿಲ್ಲ. ಆದ್ದರಿಂದ ಡಿಸೆಂಬರ್ 2 ರಂದು ನಡೆಯುವ ಜನಾಗ್ರಹ ಸಭೆಯಲ್ಲಿ ನಾವೆಲ್ಲರೂ ಒಟ್ಟು ಸೇರಿ ರಾಮಮಂದಿರ ನಿರ್ಮಾಣದ ಕುರಿತಂತೆ ನಮ್ಮ ಅಭಿಪ್ರಾಯವನ್ನು ಮಂಡಿಸಬೇಕು. ಆ ಮೂಲಕ ರಾಮಮಂದಿರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸೀತಾಪಹರಣ ನಡೆದಾಗ ಸ್ವತಃ ರಾಮನೇ ಏಕಾಂಗಿಯಾಗಿ ರಾವಣ ವಿರುದ್ಧ ಹೋರಾಡಬಹುದಿತ್ತು. ಆದರೆ ಕಪಿಗಳೊಂದಿಗೆ ಸೇತುವೆ ನಿರ್ಮಿಸಿ ಲಂಕೆಯಲ್ಲಿ ಯುದ್ಧದಲ್ಲಿ ಸೇವೆಗೆ ಅವಕಾಶ ನೀಡಿದ್ದ. ಅದೇ ರೀತಿ ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಮಗೆ ಸುವರ್ಣಾವಕಾಶ ಒದಗಿಬಂದಿದೆ. ಅದನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಆರೆಸ್ಸೆಸ್ ಮಂಗಳೂರು ವಿಭಾಗ ಸಹಕಾರ್ಯವಾಹಕ ವಾದಿರಾಜ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ಚ್ಯುತಿ ಬಾರದಂತೆ ಹಿಂದುಗಳು ನಡೆದುಕೊಂಡಿದ್ದಾರೆ. ಆದರೆ ಈಗ ಅದೇ ಸಂವಿಧಾನದ ಚೌಕಟ್ಟನ್ನು ಬಳಸಿಕೊಂಡು ಹಿಂದೂ ಸಮಾಜವನ್ನು ಮಟ್ಟಹಾಕುವುದು ಹೇಗೆ ಎಂಬ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.
ಸಮಾಜದಲ್ಲಿ ಏಕಮುಖವಾದ ಚಿಂತನೆ ಮೊಳಗಬೇಕು. ಅದಕ್ಕೆ ಸಂವಿಧಾನದಲ್ಲೂ ಬೆಲೆ ಇದೆ. ಪ್ರತಿಯೊಬ್ಬ ಹಿಂದೂ ರಾಮಮಂದಿರ ನಿರ್ಮಾಣಕ್ಕಾಗಿ ಯಾವತ್ತು ರಸ್ತೆಗಿಳಿದು ಹೋರಾಡಿಲ್ಲ. ಬದಲಾಗಿ ಮನಸ್ಸಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾನೆ. ಕಳೆದ ೨೫ ವರ್ಷಗಳಿಂದ ರಾಮಮಂದಿರದ ನಿರ್ಮಾಣದ ಕನಸು ಕಾಣುತ್ತಿದ್ದ ಹಿಂದೂಗಳ ಆಸೆ ಈಡೇರುವ ಕಾಲ ಸನ್ನಿತವಾಗಿದೆ. ಅಲ್ಲದೆ ಶೇ. ೫೦ರಷ್ಟು ದೇವರ ಮೂರ್ತಿಗಳ ಕೆತ್ತನೆ ಕಾರ್ಯವೂ ಮುಗಿದಿದೆ. ಮುಂದಿನ ಸುಪ್ರೀಂ ಕೋರ್ಟ್ ನ ತೀರ್ಪು ಕೂಡ ಹಿಂದೂ ಸಮಾಜಕ್ಕೆ ಪೂರಕವಾಗಿ ಬರಲಿದೆ. ಹಾಗಾಗಿ ಕೇಂದ್ರ ಸರಕಾರ ಹಾಗೂ ಎಲ್ಲ ರಾಜಕೀಯ ಪಕ್ಷಗಳು ರಾಮಮಂದಿರದ ನಿರ್ಮಾಣಕ್ಕೆ ಪೂರಕ ಎಂಬಂತೆ ಕೆಲಸ ಮಾಡಬೇಕು. ಇದು ಹಿಂದೂ ಸಮಾಜದ ಆಗ್ರಹವಾಗಿದೆ ಎಂದರು.
ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಉದ್ಯಮಿ ಹರಿಯಪ್ಪ ಕೋಟ್ಯಾನ್, ವಿಲಾಸ್ ನಾಯಕ್, ಬಜರಂಗದಳದ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾಧ್ಯಕ್ಷ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.ವಿಹಿಂಪ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಸ್ವಾಗತಿಸಿದರು, ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.