ಮಂಗಳೂರು, ಅ.22 (DaijiworldNews/HR): ನನ್ನನ್ನು ನನ್ನ ಪತಿ ಸ್ವೀಕರಿಸಿ ಅವರ ಮನೆಗೆ ಸೇರಿಸಿಕೊಳ್ಳಬೇಕು ಎಂದು ಎರಡು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ ಇದೀಗ ಯಾವುದೇ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ ಎಂದು ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಹೇಳಿದ್ದಾರೆ.
ಮುಸ್ಲಿಂ ಯುವಕನನ್ನು ಪ್ರೀತಿಸಿ ಮತಾಂತರವಾಗಿ ಇದೀಗ ಪತಿಯಿಂದ ನಿರಾಕರಿಸಲ್ಪಟ್ಟ ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, "ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ, ಧರ್ಮದ ಪ್ರತಿನಿಧಿ ಅಥವಾ ಯಾವುದೇ ಜಾತಿಯ ಸಂಘ ಸಂಸ್ಥೆಗಳು ತನ್ನ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು" ಎಮ್ದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ನನ್ನ ಯಾವುದೇ ವಿಷಯಕ್ಕೆ ಇಬ್ರಾಾಹಿಂ ಮತ್ತು ಅವರ ಕುಟುಂಬಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಅವರ ಪರವಾಗಿ ಅಥವಾ ವಿರುದ್ಧವಾಗಿ ನಾನು ಯಾವುದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ನೀಡುವುದಿಲ್ಲ. ನಮ್ಮ ನಡುವೆ ಈ ಮೊದಲು ಪೊಲೀಸ್ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ನನ್ನ ಇಚ್ಛೆಯಂತೆ ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸುಳ್ಯದ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವರು ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದು, ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಂಪತಿಗಳ ನಡುವೆ ಜಗಳ ಉಂಟಾಗಿ ಇಬ್ಬರು ಪರಸ್ಪರ ಬೇರೆಯಾಗಿದ್ದು, ಬಳಿಕ ಆಸಿಯಾ ಕಾನೂನು ಹೋರಾಟವನ್ನು ಆರಂಭಿಸಿದ್ದರು.