ಮಂಗಳೂರು, ನ 14(SM): ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದಾರೆ. ದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್ ಪೋರ್ಟ್ ಗೆ ರಾತ್ರಿ ಸುಮಾರ್ 8.30ಕ್ಕೆ ಆಗಮಿಸಿದರು.
ನಿಗದಿಯಾದ ಸಮಯಕ್ಕಿಂತಲೂ ಸ್ವಲ್ಪ ತಡವಾಗಿ ಆಗಮಿಸಿದ ಅಮಿತ್ ಶಾರನ್ನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹೂಗುಚ್ಛ, ಶಾಲು ಹೊದಿಸಿ ಸ್ವಾಗತಿಸಿದರು. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಮಣ್ಣಗುಡ್ಡೆಯ ಸಂಘನಿಕೇತನಕ್ಕೆ ವಿಶೇಷ ಕಾರಿಲ್ಲಿ ಬಿಗಿ ಭದ್ರತೆಯೊಂದಿಗೆ ತೆರಳಿದರು.
ಮಂಗಳೂರಿನ ಆರ್ ಎಸ್ ಎಸ್ ಕಚೇರಿ ಸಂಘನಿಕೇತನದಲ್ಲಿ ನಡೆಯುತ್ತಿರುವ ಬೈಠಕ್ ನಲ್ಲಿ ಅಮಿತ್ ಶಾ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ, ಶಬರಿಮಲೆ ಹಾಗೂ ಲೋಕಸಭೆ ಚುನಾವಣೆ ವಿಚಾರಗಳ ಬಗ್ಗೆ ಚರ್ಚಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ ಇದೇ ಸಂದರ್ಭ ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಉಂಟಾದ ಹಿನ್ನೆಡೆಯ ಬಗ್ಗೆಯೂ ಚರ್ಚೆ ನಡೆಸಿರ ಬಹುದು ಎನ್ನಲಾಗಿದೆ.
ಇಂದು ರಾತ್ರಿ ಮಂಗಳೂರಲ್ಲಿ ತಂಗಲಿರುವ ಅಮಿತ್ ಶಾ ಗುರುವಾರ ಬೆಳಿಗ್ಗೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಮಂಗಳೂರಿಗೆ ಶಾ ಆಗಮನದ ಸಂದರ್ಭ ಪೊಲೀಸರು ಬಿಗುಬಂದೋಬಸ್ತ್ ಏರ್ಪಡಿಸಿದ್ದರು. ಎಲ್ಲಾ ರೀತಿಯ ಭದ್ರತೆಗಳನ್ನು ಏರ್ಪಡಿಸಲಾಯಿತು.