ಕಾಸರಗೋಡು, ನ 14(SM): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ಬ್ಯಾನ್, ಕೇರಳದ ಸಹಕಾರಿ ವಲಯ ಪತನ ಗೊಳಿಸುವ ಗುರಿಯಾಗಿತ್ತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಕಾಸರಗೋಡು ನಗರ ಸಭಾಂಗಣದಲ್ಲಿ ಬುಧವಾರ ನಡೆದ 65ನೇ ಸಹಕಾರಿ ಸಪ್ತಾಹದ ರಾಜ್ಯ ಮಟ್ಟದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ನೋಟು ಅಮಾನ್ಯಕರಣ ಮತ್ತು ಜಿಎಸ್ ಟಿ ಸಹಕಾರಿ ವಲಯದ ಹಿನ್ನಡೆಗೆ ಕಾರಣವಾಗಿದೆ. ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡುವ ಸಹಕಾರಿ ವಲಯ ಪತನಗೊಂಡಲ್ಲಿ ಕೇರಳದ ಆರ್ಥಿಕ ಸ್ಥಿತಿಗೆ ಹೊಡೆತ ಬೀಳಲಿದೆ ಎಂದರು.
ಇನ್ನು ಕೇರಳ ಸರಕಾರ ಸಹಕಾರಿ ವಲಯವನ್ನು ರಕ್ಷಿಸಲು ಮುಂದಾಗಿದೆ. ಕೇರಳ ಬ್ಯಾಂಕ್ ಆರಂಭಿಸುವ ಗುರಿ ಹೊಂದಲಾಗಿದ್ದು, ಇದರಿಂದ ಸಹಕಾರಿ ಬ್ಯಾಂಕ್ ಇದರಡಿಯಲ್ಲಿ ಬರಲಿದೆ ಎಂದು ಹೇಳಿದರು.
ಸಹಕಾರಿ ಸಚಿವ ಕಡಗಂಪಳ್ಳಿ ಸುರೇಂದ್ರನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಇ. ಚಂದ್ರಶೇಖರನ್ ಉಪಸ್ಥಿತರಿದ್ದರು.