ಬೆಂಗಳೂರು,ನ 14 (MSP): ಲೇಡಿಸ್ ಸರ್ವೀಸ್ ಬಾರ್ ಗಳಲ್ಲಿ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ಇಲ್ಲಿಗೆ ಕರೆತಂದು ಬಳಿಕ ಅಕ್ರಮ ಬಂಧನದಲ್ಲಿರಿಸಿದ್ದ, ಬ್ರಹ್ಮಾವರದ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ನಾಗರಬಾವಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಉಡುಪಿಯ ಬ್ರಹ್ಮಾವರದ ಹೇರೂರು ಹೋಯಿಗೆ ಮನೆ ನಿವಾಸಿ ಪ್ರವೀಣ್ ಶೆಟ್ಟಿ ಯಾನೆ ಶೇಖರ್ ಶೆಟ್ಟಿ (34) ಎಂದು ಗುರುತಿಸಲಾಗಿದೆ.
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ನಾಲ್ಕನೇ ಕ್ರಾಸ್ ನ ಬಹುಮಹಡಿಯ ಕಟ್ಟಡವೊಂದರ ಎರಡನೇ ಮಹಡಿಯಲ್ಲಿ ಹಲವು ಯುವತಿಯನ್ನು ಅಕ್ರಮ ಬಂಧನದಲ್ಲಿರಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, ನ.10 ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇದೇ ವೇಳೆ ಅಕ್ರಮವಾಗಿ ವಶದಲ್ಲಿರಿಸಿದ್ದ, ದೆಹಲಿ ಮೂಲ ಮೂವರು ಹಾಗೂ ಮುಂಬಯಿ ಮೂಲದ 4, ಪಂಜಾಬ್ ಮೂಲದ 3, ರಾಜಸ್ಥಾನ ಮೂಲದ 4, ಮತ್ತು ಉತ್ತರ ಪ್ರದೇಶದ ಓರ್ವ ಯುವತಿ ಸೇರಿದಂತೆ 14 ಜನ ನೊಂದ ಯುವತಿಯನ್ನು ಬಂಧಮುಕ್ತಗೊಳಿಸಿ ರಕ್ಷಿಸಿದ್ದಾರೆ.
ಬಂಧಿತ ಆರೋಪಿಯಿಂದ ಮೊಬೈಲ್ ಹಾಗೂ 700 ರೂ ನಗದು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.