ವಿಟ್ಲ,ನ 14 (MSP): ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕೇರಳ ನಟೋರಿಯಸ್ ರೌಡಿಯಾಗಿದ್ದ ಕಾಲಿಯಾ ರಫೀಕ್ ನ ಬಂಟನನ್ನು ವಿಟ್ಲ ಪೊಲೀಸರ ತಂಡ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಬಂಗಾಡು ನಿವಾಸಿ ಶಂಶುದ್ದೀನ್(33) ಬಂಧಿತ ಆರೋಪಿ. ಈತನನ್ನು ವಿಟ್ಲ ಎಸ್ಐ ಯಲ್ಲಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದಿನೇಶ ಹಾಗೂ ಇಬ್ರಾಹಿಂ ಅವರ ತಂಡ ಕೇರಳದ ಎರ್ನಾಕುಲಂ ಜಿಲ್ಲೆಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಬಂಧಿಸಿ ವಿಟ್ಲ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಈತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ವರ್ಷದ ಹಿಂದೆ ಮಂಗಳೂರಿನಲ್ಲಿ ಹತ್ಯೆಯಾಗಿದ್ದ ಕೇರಳದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಬಂಟನಾಗಿದ್ದು, ಕಾರು ಕಳ್ಳತನ ಮಾಡುವುದರಲ್ಲಿ ನಿಸ್ಸಿಮನಾಗಿದ್ದ ಈತನ ಮೇಲೆ ಹಲವು ವಾಹನ ಕಳ್ಳತನ, ಹಲ್ಲೆ, ಗಾಂಜಾ ಸಾಗಾಟ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮೇಲೆ ಕರ್ನಾಟಕ, ಕೇರಳ ಹಾಗೂ ಮುಂಬೈಯ ವಿವಿಧ ಠಾಣೆಗಳಲ್ಲಿಯೂ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.