ಮಂಗಳೂರು, ನ 14 (MSP): ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬರುವ ಮೂಲಕ ಕೊಡಗಿನ ಯುವತಿ, ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯೊಬ್ಬಳು ಸಾಧನೆಯ ಶಿಖರವನ್ನೇರಿ ಎಲ್ಲರ ಗಮನಸೆಳೆದಿದ್ದಾರೆ. ಇವರು ಕೊಡಗಿನ ನಾಪೋಕ್ಲುವಿನ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿಯಾಗಿದ್ದಾರೆ. ಈಕೆಯ ಹೆಸರು ಭವಾನಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದಲ್ಲಿ ಹಾಗೂ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿದ್ದರು. ಪದವಿಗಾಗಿ ಅವರು ಆಯ್ದುಕೊಂಡದ್ದು ಮಂಗಳೂರಿನ ಸೇಂಟ್ ಅಗ್ನೇಸ್ ಕಾಲೇಜ್ ನ್ನು. ವಿದ್ಯಾಭ್ಯಾಸದ ಬಳಿಕ ಇದೀಗ ಡಾರ್ಜಲಿಂಗ್ ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ರಷ್ಯಾದ ಅತಿ ಎತ್ತರದ ಅಂದರೆ 5,642 ಮೀಟರ್ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತವನ್ನೇರಿ ಬಂದ ಪರ್ವತಾರೋಹಿಯಾಗಿದ್ದಾರೆ. ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವತಾರೋಹಿಗಳ ನಡುವೆ ಭಾರತವನ್ನು ಭವಾನಿ ಪ್ರತಿನಿಧಿಸಿದ್ದರು. ನಾಲ್ವರು ಪರ್ವತಾರೋಹಿಗಳಿಗೆ ರಷ್ಯಾದಲ್ಲಿ ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗಿತ್ತು. ಈ ಪರ್ವತವೂ ಯೂರೋಪ್ ದೇಶಗಳ ಪೈಕಿ ಅತೀ ಎತ್ತರದ 10ನೇ ಪರ್ವತವಾಗಿದೆ. ಹಿಮಚ್ಚಾದಿತವಾದ ಎಲ್ಬ್ರಸ್ ಪರ್ವತವನ್ನು ನಿರಂತರವಾಗಿ ಏರಿ ಸುಮಾರು 8 ಗಂಟೆಗಳಲ್ಲಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸುವಲ್ಲಿ ಭವಾನಿ ಯಶಸ್ವಿಯಾಗಿದ್ದು, ಪರ್ವತವೇರಿದ ಭಾರತದ ವೇಗದ ಹುಡುಗಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ. ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದಲಾಕೆ ಭವಾನಿಯಾಗಿದ್ದಾರೆ. ಇದಲ್ಲದೆ ಮೂವರು ಪುರುಷ ಪರ್ವತಾರೋಹಿಗಳ ನಡುವೆ ಅವರಿಗೆ ಸರಿಸಮಾನವಾಗಿ ಮತ್ತು ಅವರಿಗಿಂತ ಮೊದಲೇ ಪರ್ವತದ ತುತ್ತತುದಿಯನ್ನು ತಲುಪಿದ್ದು ಕೂಡ, ಭವಾನಿ ಅವರ ವಿಶೇಷ ಸಾಧನೆಯಾಗಿದೆ.
ಅಕ್ಟೋಬರ್ 18ರಂದು ನಡುರಾತ್ರಿ ಪರ್ವತಾರೋಹಣ ಆರಂಭಿಸಿದ್ದು, ಕೊರೆಯುವ ಚಳಿ, ಹಿಮದ ಮೇಲೆ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ ನಾಲ್ವರ ತಂಡ ಅಕ್ಟೋಬರ್ 19ರಂದು ಬೆಳಗ್ಗೆ 9.30ಕ್ಕೆ ಮೌಂಟ್ ಎಲ್ಬ್ರಸ್ ಶಿಖರ ತುತ್ತ ತುದಿ ತಲುಪಿ ಸಂಭ್ರಮಿಸಿದ್ದರು. ಭವಾನಿ ಅವರಿಗೆ ಮೊದಲಿನಿಂದಲೂ ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿಯಿದ್ದು ಮೌಂಟ್ ಎವರೆಸ್ಟ್ನ್ನೇರುವ ಹಂಬಲವೂ ಇದೆ ಎನ್ನುತ್ತಾರೆ.