ಕುಂದಾಪುರ, ಅ 14: ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮರಣದಂಡನೆ ತೀರ್ಪಿಗೆ ಗುರಿಯಾಗಿದ್ದ ಕೊಲೆ ಆರೋಪಿ ಹೆಮ್ಮಾಡಿಯ ಸತೀಶ್ ಎಂಬಾತನಿಗೆ ಹೈಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ.
ಯುವತಿಯೊರ್ವಳ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಸತೀಶ್ ಪೂಜಾರಿಯನ್ನು ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಕುಂದಾಪುರ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
ಹೆಮ್ಮಾಡಿಯ ಪೇಟೆಯಲ್ಲಿ ಫ್ಯಾನ್ಸಿ ಅಂಗಡಿಯೊಂದನ್ನು ನಡೆಸುತ್ತಿದ್ದ ವಿವಾಹಿತ ಸತೀಶ್ ಪೂಜಾರಿ ನೂಜಾಡಿ ಬಳಿಯ ಯುವತಿಯನ್ನು ಕೊಲೆಗೈದು ಶವವನ್ನು ನೂಜಾಡಿ ಬಳಿಯ ಕುಳೂರು ಕ್ರಾಸ್ ಸಮೀಪ ಎಸೆದು ಬಂದಿದ್ದ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ವೃತ್ತನಿರೀಕ್ಷಕ ಮದನ ವಿ. ಗಾಂವ್ಕರ್ ಅವರು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಬಳಿಕ ಆರೋಪಿ ಸತೀಶ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ರವಿ ಮಳಿಮಠ ಹಾಗೂ ಮೈಕಲ್ ಡಿ ಕುನ್ನಾ ಆರೋಪಿ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.