ಮಂಗಳೂರು, ನ 13(SM): ಜ್ಯುವೆಲ್ಲರಿ ಮಾಲಕನ ದರೋಡೆ ಸಂಚು ರೂಪಿಸಿದ 11 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ಕೆಲವು ಯುವಕರು ಒಟ್ಟು ಸೇರಿಕೊಂಡು ದರೋಡೆ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರೌಡಿ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಮಂಗಳೂರು ಹಿಲ್ಸ್ ರಸ್ತೆ ಬದಿಯಲ್ಲಿ ಮಾರುತಿ 800 ಕಾರು, ಮಾರುತಿ ರಿಟ್ಜ್ ಕಾರು ಮತ್ತು 2 ಬೈಕ್ ಗಳಲ್ಲಿದ್ದವರನ್ನು ತಡೆದು ಅಲ್ಲಿದ್ದ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶೇಖ್ ಮಹಮ್ಮದ್ ಅನ್ಸಾರ್(34), ರಮೀಜ್ ಯಾನೆ ರಮೀಜ್ ಕೆ.ಸಿ.ರೋಡ್(21), ಮಹಮ್ಮದ್ ತೌಸೀಫ್ ಯಾನೆ ತಚ್ಚು(24), ಮಹಮ್ಮದ್ ತೌಸೀಫ್ ಯಾನೆ ತೌಸೀಫ್(25), ಉಬೇದುಲ್ಲಾ(25), ಮಹಮ್ಮದ್ ಆಲಿ(25), ಅಹಮ್ಮದ್ ಕಬೀರ್(30), ಅಸ್ಗರ್ ಆಲಿ ಯಾನೆ ಅಸ್ಗರ್(27), ಸಾಬೀತ್(19), ಮೊಹಮ್ಮದ್ ಸಬಾದ್ ಯಾನೆ ಸವಾದ್(22) ಹಾಗೂ ಅಮೀರ್ ಆಲಿ(19) ಬಂಧಿತ ಆರೋಪಿಗಳು.
ಆರೋಪಿಗಳಿಂದ ೨ ಕಾರುಗಳು, ಚೂರಿ, ಕಬ್ಬಿಣದ ರಾಡ್ ಹಾಗೂ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಗರ ಜ್ಯುವೆಲ್ಲರಿ ಮಾಲಿಕರೊಬ್ಬರನ್ನು ದರೋಡೆಗೈಯಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಲ್ಲೆ ಪ್ರಕರಣ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗರುವ ಬಗ್ಗೆ ತನಿಖೆಯ ವೇಳೆ ತಿಳಿದು ಬಂದಿರುತ್ತದೆ.