ಮಡಿಕೇರಿ, ನ 13(MSP): ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನವಾಗುತ್ತಿದ್ದಂತೆ ಗೋಣಿಕೊಪ್ಪದಲ್ಲಿ ಅಸಮಧಾನದ ಹೊಗೆ ಎದ್ದಿದ್ದು, ಪ್ರತಿಭಟನೆ ರೂಪ ಪಡೆಯಲಾರಂಭಿಸಿದೆ. ಹಿಂದೂಪರ ಕಾರ್ಯಕರ್ತರು ಸೇರಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಗೋಣಿಕೊಪ್ಪದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸುವ ನೆಪದಲ್ಲಿ ಸಂತೋಷ್ ತಮ್ಮಯ್ಯ ಧರ್ಮವೊಂದನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಇವರ ವಿರುದ್ದ ಸಿದ್ದಾಪುರ ಕರಡಿಗೋಡು ಗ್ರಾಮ ನಿವಾಸಿ ಕೆ.ಜಿ. ಅನ್ವರ್ ಎಂಬವರು ಸಮಾಜದ ಶಾಂತಿ ಕದಡುವ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದರು.
ಗೋಣಿಕೊಪ್ಪದ ಪ್ರಜ್ಞಾ ಕಾವೇರಿ ಸಂಘಟನೆಯೂ ನವೆಂಬರ್ 5ರಂದು ಆಯೋಜಿಸಿದ್ದ "ಟಿಪ್ಪು ಕರಾಳ ಮುಖಗಳ ಅನಾವರಣ" ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ್ದ ಪತ್ರಕರ್ತ ತಮ್ಮಯ್ಯ ಧರ್ಮವೊಂದರ ಬಗ್ಗೆ ಅವಹೇಳಿಸಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅತ್ತ ಕಡೆ ಅವರ ಬಂಧನ ವಿರೋಧಿಸಿ ಪ್ರತಿಭಟನೆಗಳನು ನಡೆಯತೊಡಗಿದೆ.