ಬಂಟ್ವಾಳ, ಅ 15 (DaijiworldNews/MS): ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಸಂಭವಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಮೃತರನ್ನು ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಅವರು ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತಡರಳುತ್ತಿದ್ದಾಗ ಎದುರಿನಿಂದ ಬಂದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಆಸ್ಪತ್ರೆಗೆ ಬೀಗ:
ಗಾಯಾಳು ಆಬೂಬಕ್ಕರ್ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಜೆ ತರಲಾಯಿತು. ಈ ವೇಳೆ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಇಲ್ಲಿನ ವೈದ್ಯರು ರಜೆಯ ಮೇಲೆ ತೆರಳಿದ್ದರೆ ಇತರ ಸಿಬ್ಬಂದಿಗಳು ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ. ಚಿಂತಾಜನಕ ಸ್ಥಿತಿಯಲ್ಲಿದ್ದ ಅಬೂಬಕ್ಕರ್ ಅವರನ್ನು ತಕ್ಷಣ ಅದೇ ಜೀಪಿನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಒಬ್ಬನೇ ಒಬ್ಬ ಸಿಬ್ಬಂದಿಗಳಿಲ್ಲದೆ ಬೀಗ ಹಾಕಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜೀವ ಉಳಿಸಬೇಕಾದ ಸರಕಾರಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಇದೊಂದು ಉದಾಹರಣೆ ಆಗಿದೆ.
ಈ ಹಿಂದೆಯೂ ಕೂಡ ಇದೇ ರೀತಿಯ ಘಟನೆಗಳಾದಾಗಲೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಗಾಯಳುಗಳು, ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದ ಪ್ರಸಂಗಗಳು ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶುಕ್ರವಾರ ನಡೆದ ಅಪಘಾತದಿಂದ ಗಂಭೀರ ಗಾಯಗೊಂಡ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಎಚ್.ಸಿ.ಆಬೂಬಕ್ಕರ್ ಅವರು ಜೀವನಮ್ಮರಣ ಹೋರಾಟ ನಡೆಸುತ್ತಿದ್ದರು, ಈ ಸಂದರ್ಭದಲ್ಲಿ ಅವರಿಗೆ ತುರ್ತು ಚಿಕಿತ್ಸೆ ದೊರಕದಿದ್ದು, ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿದೆ.
ಇವರ ಅಕಾಲಿಕ ಸಾವಿನಿಂದ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಸಿಬ್ಬಂದಿಗಳ ಕಣ್ಣೆದುರಲ್ಲೆ ಪ್ರಾಣಬಿಟ್ಟ ಸಹಪಾಠಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.
ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಲ್ಲಿ ಸಹೋದ್ಯೋಗಿಯ ಅಕಾಲಿಕ ಸಾವಿನಿಂದ ಪುಂಜಾಲಕಟ್ಟೆ ಠಾಣೆ ಶೋಕತಪ್ತವಾಗಿದೆ.
ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.