ಮಂಗಳೂರು, ನ 13(MSP): ಶ್ರೀ ರಾಮನ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತರಲು ಒತ್ತಾಯಿಸಿ ನಗರದ ಕೇಂದ್ರ ಮೈದಾನದಲ್ಲಿ ಜನಾಗ್ರಹ ಸಭೆ ಹಾಗೂ ಬೃಹತ್ ಮೆರವಣಿಗೆ ನ.25 ರ ಭಾನುವಾರ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ ಪುರಾಣಿಕ್ ತಿಳಿಸಿದ್ದಾರೆ
ನ.12 ರ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 1528 ರಿಂದಲೂ ಹಿಂದೂ ಸಮಾಜ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಆಯೋಧ್ಯೆ ವಿವಾದ ವಿಚಾರಣೆಯೂ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು ತೀರ್ಪು ಇನ್ನು ಹೊರಬಿದ್ದಿಲ್ಲ. ಹೀಗಾಗಿ ಪದೇ ಪದೇ ರಾಮ ಮಂದಿರ ನಿರ್ಮಾಣ ತಡವಾಗುತ್ತಿದೆ. ಹೀಗಾಗಿ ಕೋಟ್ಯಾಂತರ ಹಿಂದುಗಳ ಶ್ರದ್ದೆಯ, ನಂಬಿಕೆ ಪ್ರತೀಕವಾದ ಅಯೋಧ್ಯೆಯ ರಾಮಮಂದಿರ ನಿರ್ಮಿಸಲು ಇರುವ ಎಲ್ಲಾ ಅಡೆತಡೆಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆ ಮೂಲಕ ನಿವಾರಿಸಬೇಕು ಎಂದು ಆಗ್ರಹಿಸಿ ಈ ಜನಾಗ್ರಹ ಸಭೆ ನಡೆಸಲಾಗುತ್ತಿದೆ ಎಂದರು.
ಈ ಬಗ್ಗೆ ದೇಶದ ಸಾಧು ಸಂತರುಗಳ ಸಮಿತಿ, ಅ. 5 ರಂದು ಸಭೆ ನಡೆಸಿ ಚರ್ಚಿಸಿ, ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಜನಾಗ್ರಹ ಸಭೆ ನಡೆಸಬೇಕೆಂದು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಜನಾಗ್ರಹ ಸಭೆಯನ್ನು ವಿಶ್ವಹಿಂದೂ ಪರಿಷತ್ ಆಯೋಜಿಸಿದೆ. ಜನಾಗ್ರಹ ಸಭೆಯ ಮುಂಚಿತವಾಗಿ ನ.25 ರ ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಸಾವಿರಾರು ರಾಮಭಕ್ತರು ನಗರದ ಜ್ಯೋತಿಯಿಂದ ಕೇಂದ್ರ ಮೈದಾನದವರೆಗೆ ನಡೆಯುವ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಂಗಳೂರು ವಿಭಾಗದ ಜಿಲ್ಲೆಗಳಾದ ಉಡುಪಿ, ಕೊಡಗು , ಕಾಸರಗೋಡು ಜಿಲ್ಲೆಗಳಲ್ಲೂ ಈ ಜನಾಗ್ರಹ ಸಭೆ ನಡೆಯಲಿದ್ದು, ಡಿ. 2ರಂದು ಉಡುಪಿಯಲ್ಲಿ, ನ.30ರಂದು ಕೊಡಗಿನಲ್ಲಿ , ನ.18ರಂದು ಕಾಸರಗೋಡಿನಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದೂ ಪರಿಷತ್ ನ ಕಾರ್ಯದರ್ಶಿ ಶರಣ್ ಪಂಪ್ ವೆಲ್ , ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ , ಪ್ರವೀಣ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.