ಮಂಗಳೂರು, ಅ.15 (DaijiworldNews/PY): ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ದಾಖಲೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ 18 ದಿನಗಳ ನಂತರ ಬೇರೆ ಆಸ್ಪತ್ರೆಗೆ ದಾಖಲಿಸಿದ ವೇಳೆ ಅಲ್ಲಿ ಗಂಡು ಮಗು ಎಂದು ತಿಳಿದುಬಂದಿದ್ದು, ಪೋಷಕರಲ್ಲಿ ಗೊಂದಲ ಉಂಟಾಗಿದೆ.
ಕುಂದಾಪುರದ ಮಹಿಳೆಯೋರ್ವರು ಸೆ.27ರಂದು ಇಲ್ಲಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಹೆರಿಗೆಯ ಬಳಿಕ ಹೆಣ್ಣು ಮಗು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು. ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ 18 ದಿನಗಳ ಕಾಲ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯದ ಕುರಿತು ವೈದ್ಯರು ಖಚಿತವಾದ ಮಾಹಿತಿ ನೀಡದ ಕಾರಣ ಮಗುವನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂದರ್ಭ ಮಗು ಗಂಡು ಎಂದು ತಿಳಿದುಬಂದಿದೆ ಎಂದು ಮಗುವಿನ ತಂದೆ ಮುಸ್ತಫಾ ತಿಳಿಸಿದ್ದಾರೆ.
ನಂತರ ನಾವು ಮಗುವನ್ನು ಪುನಃ ಲೇಡಿಗೋಶನ್ ಆಸ್ಪತ್ರೆಗೆ ಕರೆತಂದು, ವೈದ್ಯಾಧಿಕಾರಿ ಬಳಿ ಈ ಬಗ್ಗೆ ಪ್ರಶ್ನಿಸಿದೆವು. ಈ ವೇಳೆ ಅವರು, "ಈ ಮಗು ನಿಮ್ಮದೇ, ದಾಖಲೆಯಲ್ಲಿ ನಮೂದಿಸುವ ವೇಳೆ ತಪ್ಪಾಗಿದೆ" ಎಂದು ಹೇಳಿರುವುದಾಗಿ ಮುಸ್ತಾಫಾ ಹೇಳಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದುರ್ಗಾಪ್ರಸಾದ್ ಎಂ ಆರ್ ಅವರು ಪ್ರತಿಕ್ರಿಯಿಸಿದ್ದು, "ಆಸ್ಪತ್ರೆಯಲ್ಲಿ ಯಾವುದೇ ಮಗುವನ್ನು ಅದಲು ಬದಲು ಮಾಡಿಲ್ಲ. ದಾಖಲೆಯಲ್ಲಿ ನಮೂದಿಸುವ ವೇಳೆ ತಪ್ಪಾಗಿದೆ. ಹೆಣ್ಣು ಮಗು ಎಂದು ವೈದ್ಯರು ತಪ್ಪಾಗಿ ಉಲ್ಲೇಖಿಸಿದ್ದಾರೆ. ಆದರೆ, ಜನಿಸಿದ್ದು ಗಂಡು ಮಗು" ಎಂದು ತಿಳಿಸಿದ್ದಾರೆ.
"ಮಗುವಿನ ಲಿಂಗ ಉಲ್ಲೇಖಿಸುವ ಸಂದರ್ಭ ತಪ್ಪಾಗಿದೆ. ಇದಕ್ಕೆ ನಾವು ಕ್ಷಮೆ ಕೋರುತ್ತೇವೆ. ಆದರೆ, ಮಗುವನ್ನು ಅದಲು ಬದಲಾಗಿದೆ ಮಾಡಲಾಗಿದೆ ಎಂದು ಹೇಳುವುದು ತಪ್ಪು" ಎಂದಿದ್ದಾರೆ.
ಮಗುವಿಗೆ ಆರೋಗ್ಯ ಸಮಸ್ಯೆಗಳಿವೆ ಎಂಬ ಆರೋಪವನ್ನು ಉಲ್ಲೇಖಿಸಿದ ದುರ್ಗಾಪ್ರಸಾದ್, "ಕುಂದಾಪುರ ಆಸ್ಪತ್ರೆಯ ಆರೋಪದಂತೆ ಆಸ್ಪತ್ರೆಯು ತಪಾಸಣೆಗಳನ್ನು ಕೈಗೊಂಡಿದೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.