ನವದೆಹಲಿ, ನ 13(MSP): ಶಬರಿಮಲೆಯಲ್ಲಿ ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಇಂದು ಸಲ್ಲಿಕೆಯಾಗಿರುವ 42 ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿದೆ.
ಸುಪ್ರಿಂಕೋರ್ಟ್ ಸೆ.28ರಂದು ಎಲ್ಲಾ ವಯಸ್ಸಿನ ಮಹಿಳೆಯರು ಶಬರಿ ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಮೇಲ್ಮನವಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಮಂಗಳವಾರ ಮಧ್ಯಾಹ್ನದ ಬಳಿಕ ಪರಿಶೀಲನೆ ನಡೆಸಲಿದೆ.
ಈ ನಡುವೆ ಮಂಡಲೋತ್ಸವ ಮತ್ತು ಮಕರ ವಿಳಕ್ಕು ಸಂದರ್ಭಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲು ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ. ಅಧಿಕಾರಿಗಳಿಗೆ ಪೂರ್ವ ಸಿದ್ಧತೆ ನಡೆಸಲು ಸಮಯದ ಕೊರತೆ ಕಾಡುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೇಗುಲದ ಆಡಳಿತ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ವಕೀಲರಾಗಿ ನೇಮಕಗೊಂಡಿದ್ದ ಸಿ.ಆರ್ಯಂ ಸುಂದರಂ ತಮ್ಮ ಹಿಂದಿನ ನಿರ್ಧಾರ ಬದಲಾಯಿಸಿದ್ದಾರೆ. ಅವರು ಈಗ ನಾಯರ್ ಸರ್ವಿಸ್ ಸೊಸೈಟಿ (ಎನ್ಎಸ್ಎಸ್) ಪರವಾಗಿ ವಾದಿಸಲಿದ್ದಾರೆ. ಟಿಡಿಬಿ ಪರವಾಗಿ ಹಿರಿಯ ನ್ಯಾಯವಾದಿ ಶೇಖರ್ ನಾಫ್ಡೆ ವಾದಿಸಲಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲವಿವಾದ ಪ್ರಕರಣದಲ್ಲಿ ನಾಫ್ಡೆ ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ್ದರು.