ವಿಟ್ಲ, ನ 12(SM): ಸ್ವಸಹಾಯ ಗುಂಪಿನ ಹಣ ಕಟ್ಟಿ ಹಿಂತಿರುಗುತ್ತಿದ್ದ ವೇಳೆ ಮಹಿಳೆಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತೇನೆ ಎಂದು ಬೆದರಿಸಿ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕೊಳ್ನಾಡು ಗ್ರಾಮದ ಕಲ್ಲಮಜಲು ಸಮೀಪದ ಬಾರೆಬೆಟ್ಟು ಮದಕ ನಿವಾಸಿ ರಮ್ಲ ಬ್ಯಾರಿಯವರ ಪುತ್ರ ಅಶ್ರಪ್ ಬಂಧಿತ ಆರೋಪಿ.
ಕೊಳ್ನಾಡು ಗ್ರಾಮದ ಸೇರ್ಕಳ ನಿವಾಸಿ ಸುಂದರ ಬೈರರವರ ಪತ್ನಿಯವರು ನ.೯ರಂದು ಸ್ವಸಹಾಯ ಗುಂಪಿನ ಹಣವನ್ನು ಕಟ್ಟಲು ತೆರಳುತ್ತಿದ್ದ ವೇಳೆ ಪಡಾರು ಎಂಬಲ್ಲಿ ಬೈಕಿನಲ್ಲಿ ಬಂದ ಆರೋಪಿ ತಡೆದು ನಿಲ್ಲಿಸಿ ನಿನ್ನ ಗಂಡನ ಮೊಬೈಲ್ ಸಂಖ್ಯೆ ನೀಡು ಎಂದು ಹೇಳಿ ಬೆದರಿಸಿದ್ದ.
ಅಲ್ಲದೆ ನಿನ್ನ ಅಶ್ಲೀಲ ಭಾವಚಿತ್ರಗಳು ನನ್ನ ಬಳಿ ಇದೆ. ನಾನು ಹೇಳಿದ ಹಾಗೆ ನೀನು ಕೇಳದಿದ್ದಲ್ಲಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಹೇಳಿ ಕೈ ಹಿಡಿದೆಲೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿ ಮಹಿಳೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.