ಉಡುಪಿ, ಅ 14: ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳ ಹೊಂಡ-ಗುಂಡಿಗಳನ್ನು ಡಿಸೆಂಬರ್ ತಿಂಗಳ ಒಳಗೆ ಮುಚ್ಚುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಸೂಚನೆ ನೀಡಿದ್ದಾರೆ.
ಉಡುಪಿಯ ತಾಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ನಡೆದ ಇಂಜಿನಿಯರುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ನಾಡಹಬ್ಬ ಪರ್ಯಾಯ ಉತ್ಸವ ಇದ್ದು, ಈ ವೇಳೆ ಎಲ್ಲಾ ರಸ್ತೆಗಳು ವ್ಯವಸ್ಥಿತವಾಗಿರಬೇಕು ಎಂದು ತಿಳಿಸಿದರು.
ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಮೀನುಗಾರಿಕೆ, ಲೋಕೊಪಯೋಗಿ ಇಲಾಖೆಗೆ ಸೇರಿದ ರಸ್ತೆಗಳಲ್ಲಿ ನಿರ್ಮಾಣಗೊಂಡಿರುವ ಹೊಂಡ ಗುಂಡಿಗಳನ್ನು ಮುಚ್ಚುವ ಜೊತೆಗೆ, ದುಸ್ಥಿತಿಯಲ್ಲಿರುವ ರಸ್ತೆಗಳ ದುರಸ್ತಿ ಕಾರ್ಯ ನಡೆಸಬೇಕು ಎಂದು ಇಂಜಿನಿಯರ್ ಗಳಿಗೆ ಖಡಕ್ ಆದೇಶ ನೀಡಿದರು.