ಕುಂದಾಪುರ, ನ 12 (MSP): ಸಾಧಿಸಲು ಮನಸ್ಸಿದ್ದರೆ ಮಾರ್ಗವಿದ್ದೇ ಇರುತ್ತದೆ. ಸಾಧನೆಗೆ ಛಲ ಹಾಗೂ ಆಸಕ್ತಿ ಮುಖ್ಯ ಎನ್ನುವುದಕ್ಕೆ ಕುಂಭಾಸಿ ಪಣ್ಹತ್ವಾರ್ಬೆಟ್ಟಿನ ನಿವಾಸಿ ಪ್ರೇಮ ಗಣೇಶ ಪೂಜಾರಿ ಅವರೇ ಸಾಕ್ಷಿ.
ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರೇಮ ಮದುವೆಯಾಗಿ ಬಂದ ಮೇಲೂ ಅವರ ಕೃಷಿ ಪ್ರೇಮ ಬಿಡಲಿಲ್ಲ. ತವರಿನಲ್ಲಿ ಪರಂಪರಿಕವಾಗಿ ಮಾಡುತ್ತಿದ್ದ ಮಲ್ಲಿಗೆಯ ನಂಟು ಅವರನ್ನು ನೆನಪಿಸುತ್ತಲೇ ಇತ್ತು. ಆದರೆ ಪತಿ ಮನೆಯಲ್ಲಿ ಮಲ್ಲಿಗೆ ಕೃಷಿಗೆ ಸ್ಥಳಾವಕಾಶದ ಕೊರತೆ ಕಾಡಿದಾಗ ಅವರ ಆಲೋಚನಾ ಲಹರಿ ಹರಿದಿದ್ದು ಟೆರೆಸ್ ಮೇಲಿನ ಖಾಲಿ ಜಾಗದತ್ತ. ಸುಮಾರು ೧೦೦ಕ್ಕೂ ಹೆಚ್ಚು ಕುಂಡಗಳನ್ನು ಖರೀದಿಸಿ ತಂದು ಅದಕ್ಕೆ ಮಣ್ಣು-ಸುಡುಮಣ್ಣು-ಸಾವಯವ ಪದಾರ್ಥಗಳನ್ನು ಮಿಶ್ರಣ ಮಾಡಿ ತಾಯಿ ಮನೆಯಿಂದ ಮಲ್ಲಿಗೆ ಗಿಡ ತಂದು ನಾಟಿ ಮಾಡಿಯೇ ಬಿಟ್ಟರು. ದಿನಕ್ಕೆರಡು ಬಾರಿ ನೀರುಣಿಸಿದರು. ಜತನದಿಂದ ಆರೈಕೆ ಮಾಡಿದರು. ವರ್ಷದೊಳಗೆ ಮಹಡಿಯಲ್ಲಿ ಘಮ್ಮೆಂದಿತು ಮಲ್ಲಿಗೆ. ಇದು ಏಳು ವರ್ಷಗಳ ಹಿಂದಿನ ಪ್ಲ್ಯಾಶ್ಬ್ಯಾಕ್.
ಏನಾದರೂ ಸಾಧನೆ ಮಾಡಬೇಕು ಎನ್ನುವವರಿಗೆ ಈ ಗೃಹಿಣಿ ಒಳ್ಳೆಯ ಉದಾಹಣೆ. ಇವತ್ತು ಮನೆಯ ಟೆರೆಸ್ ಮೇಲೆ 1200 ಚದರ ಅಡಿ ಪ್ರದೇಶದಲ್ಲಿ ಸಮೃದ್ದವಾಗಿ ಬೆಳೆದಿರುವ 110 ಕ್ಕೂ ಹೆಚ್ಚು ಮಲ್ಲಿಗೆ ಗಿಡಗಳು ಹೂ ಬಿಡುತ್ತಿವೆ. ಈ ಸಮಯದಲ್ಲಿ ಕನಿಷ್ಠ 2-3 ಸಾವಿರ ಹೂ ಸಿಗುತ್ತಿವೆ. ಒಳ್ಳೆಯ ಧಾರಣೆಯೂ ಸಿಗುತ್ತಿದೆ. ಉಪ ಕಸುಬಾಗಿಯೂ ಆರ್ಥಿಕ ಶಕ್ತಿಯನ್ನು ಜಾಸ್ಮಿನ್ ಪ್ರೇಮ ಕುಟುಂಬಕ್ಕೆ ಆಸರೆಯಾಗಿದೆ.
ಮಲ್ಲಿಗೆ ಬೇಗ ಹಾಗೂ ಮಾರುಕಟ್ಟೆ ಚೆನ್ನಾಗಿದ್ದರೆ ಒಳ್ಳೆಯ ಆರ್ಥಿಕ ಮೂಲ. ಮಲ್ಲಿಗೆಯಂಥಹ ಪುಷ್ಪಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಾಯಾಮವೂ ಆಗುತ್ತದೆ. ಲವಲವಿಕೆಗೂ ಕಾರಣವಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಹೂವು ಕೊಯ್ದು, ಅದನ್ನು ಕಟ್ಟಿ ಮಾರುಕಟ್ಟೆಗೆ ನೀಡುವ ಉತ್ಸಾಹ ಹೊಸ ಸ್ಪೂರ್ತಿಗೆ ಕಾರಣವಾಗುತ್ತದೆ. ಪ್ರೇಮ ಅವರ ತವರು ಕಟ್ಕೆರೆಯ ದೂಮನಕೊಡ್ಲು. ಅಲ್ಲಿಂದಲೇ ಆರಂಭವಾದ ಪುಷ್ಪಕೃಷಿ ಪ್ರೀತಿ ಇವತ್ತು ಗಂಡನ ಮನೆಗೂ ಅದನ್ನು ವಿಸ್ತರಿಸಿದೆ. ಪುಷ್ಪ ಕೃಷಿಯ ಜೊತೆಗೆ ಗಿಡಗಳ ತಯಾರಿಸಿ, ಮಾರಾಟವನ್ನು ಮಾಡುತ್ತಿದ್ದಾರೆ. ಮಲ್ಲಿಗೆ ಕೃಷಿ ಮಾಡುವಂತೆ ಕುಟುಂಬಿಕರಿಗೆ ಸಲಹೆಯನ್ನು ನೀಡುತ್ತಿದ್ದಾರೆ. ಆದರಿಂದ ಅವರ ಕುಟುಂಬದ ಬಹುತೇಕರು ಮಲ್ಲಿಗೆ ಕೃಷಿ ನಿರತರಾಗಿದ್ದಾರೆ.
ಪ್ರೇಮ ಅವರ ಜೊತೆ ಪತಿ ಗಣೇಶ ಪೂಜಾರಿ, ಮಕ್ಕಳಾದ ಪ್ರಥಮ್, ಪ್ರಣವ್ ಹಾಗೂ ಮನೆಯ ಸದಸ್ಯರು ಸಹಕರಿಸುತ್ತಾರೆ. ಪುಷ್ಪ ಕೃಷಿ ಒಂದು ರೀತಿ ಖುಷಿ, ಆಹ್ಲಾದನೀಯತೆ ನೀಡುತ್ತದೆ ಎನ್ನುವ ಇವರು ಮಲ್ಲಿಗೆಯಲ್ಲಿ ಸೀಸನ್ ಸಮಯದಲ್ಲಿ 10 ಸಾವಿರದ ತನಕ ಹೂವು ಪಡೆಯುತ್ತಾರೆ. ಸಾವಯವ ವಿಧಾನ ಅನುಸರಣೆಯಿಂದ ರೋಗ-ಕೀಟ ಬಾಧೆ ಕಡಿಮೆ. ಗುಣಮಟ್ಟದ ಹೂವು ಸಿಗುತ್ತದೆ. ಪ್ರತೀ ವರ್ಷ ಹೊಸ ಮಣ್ಣು ಬಳಕೆ, ಶೇಂಗಾ ಹಿಂಡಿಯನ್ನು ಕರಗಿಸಿ ಕೊಡುವುದರಿಂದ ಗಿಡದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಮಳೆಗಾಲ ಪೂರ್ವದಲ್ಲಿ ಚಾಟ್ನಿ ಮಾಡುವುದರಿಂದ ಗಿಡ ಹೊಸ ಕೂಡಿಗಳೊಂದಿಗೆ ಹುಲುಸಾಗಿ ಬೆಳೆಯುತ್ತದೆ.
ಪ್ರೇಮ ಅವರು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕುಂಭಾಸಿ ಒಕ್ಕೂಟ ವ್ಯಾಪ್ತಿಯ ಶ್ರೀ ರಾಘವೇಂದ್ರ ಸ್ವಸಹಾಯ ಸಂಘದ ಸದಸ್ಯೆ. ಇವರ ಯಶೋಗಾಥೆಯನ್ನು ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಧ.ಗ್ರಾ ಯೋಜನೆಯ ಕೃಷಿ ಅಧಿಕಾರಿ ಚೇತನ್ ಅವರ ಸಲಹೆ ಸೂಚನೆಗಳು ಯಶಸ್ಸಿಗೆ ಕಾರಣವಾಗಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಪ್ರೇಮ ಗಣೇಶ ಪೂಜಾರಿ ಅವರ ಯಶೋಗಾಥೆ ಮಾರ್ಗದರ್ಶಿಯಂತಿದೆ. ಎಕರೆಗಟ್ಟಲೆ ಜಮೀನು ಇದ್ದು ಹಡಿಲು ಬಿಡುವವರ ನಡುವೆ ಮನೆಯ ತಾರೆಸಿ ಮೇಲೇಯೇ ಮಲ್ಲಿಗೆ ಕೃಷಿ ಮಾಡಿ ಪ್ರಗತಿಯ ದಾರಿ ಕಂಡುಕೊಂಡಿರುವುದು ಸ್ತುತ್ಯರ್ಹವೇ ಸರಿ.