ಬಂಟ್ವಾಳ, ಅ 12 (DaijiworldNews/MS): ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರಿನ ಕಮ್ಯುನಿಟಿ ಹಾಲ್ ಬಳಿ ಅ. 12 ರ ಮಂಗಳವಾರ ನಡೆದಿದೆ.
ಇಲ್ಲಿನ ನಿಡ್ಪಳ್ಳಿ ನಿವಾಸಿ, ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಸುರೇಶ್ ನಾಯ್ಕ ಆರ್.(43) ಮೃತಪಟ್ಟವರು. ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಗಂಭೀರ ಗಾಯಗೊಂಡಿದ್ದ ಸುರೇಶ್ ನಾಯ್ಕರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ದೃಢಪಡಿಸಿದರೆನ್ನಲಾಗಿದೆ.
ಅಪಘಾತ ನಡೆಸಿ ಚಿಕಿತ್ಸೆಯನ್ನು ಕೊಡದೆ ವಾಹನ ಸಹಿತ ಪಲಾಯನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.