ಉಪ್ಪಿನಂಗಡಿ, ಅ 12 (DaijiworldNews/MS): ಚಲಿಸುತ್ತಿದ್ದ ಬಸ್ಸಿನಡಿಗೆ ಸಿಲುಕಿ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಅ. 11 ರ ಮಂಗಳವಾರ ನಡೆದಿದೆ.
ತಾಯಿ-ಮಗು ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಧಿಡೀರನೆ ಆಗಮಿಸಿದ ಕೆಎಸ್ಆರ್ ಟಿಸಿ ಬಸ್ ಚಲಿಸಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25) ಹಾಗೂ ಅವರ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭ ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಬೂತ್ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ತಾಯಿ ಮತ್ತು ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.