ಮಂಗಳೂರು ಅ 12 (DaijiworldNews/MS): ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ (66) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇಂದು ಬೆಳಗ್ಗೆ 7.30 ಕ್ಕೆ ಹೃದಯಘಾತವಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚುತ್ತಿರುವ ಪದ್ಯಾಣ ಗಣಪತಿ ಭಟ್ಟರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದರಾಗಿದ್ದರು.
ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನನಿದ್ದ ಗಣಪತಿ ಭಟ್ ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಅಭ್ಯಾಸಿಸಿದ್ದರು. ಅಜ್ಜನ ಶಿಷ್ಯರಾಗಿದ್ದ ಮಾಂಬಾಡಿ ನಾರಾಯಣ ಭಾಗವತರಲ್ಲಿ ಮುಂದಿನ ಅಭ್ಯಾಸ ಮಾಡಿದ್ದರು. ಎರಡು ವರ್ಷಗಳಲ್ಲೇ ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿಯತ್ತ ಸಾಗಿದ ಗಣಪತಿ ಭಟ್ಟರು 1971ರಲ್ಲಿ ಅಂದರೆ, ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್ ಮೇಳ ಸೇರಿದ ಪದ್ಯಾಣ ತನ್ನ ವ್ಯವಸಾಯ ಜೀವನದುದ್ದಕ್ಕೂ ಸಿದ್ಧಿ- ಪ್ರಸಿದ್ಧಿ ಸಹಿತ ಅಪಾರ ಯಶಸ್ಸು ಪಡೆದಿದ್ದರು.
40 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು
ಪ್ರಶಸ್ತಿಗಳು:
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಈಟಿವಿಯ "ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತರಾಗಿದ್ದರು . ಇದಲ್ಲದೆ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಮಾಡಿದ್ದರು.