ಬೆಂಗಳೂರು, ನ 12 (MSP): ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸಿದ್ದ, ಸೋಲಿಲ್ಲದ ಸರದಾರರಾಗಿ ಆರು ಬಾರಿ ಸಂಸದರಾಗಿದ್ದ ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ತಮ್ಮ ಬಿಡುವಿಲ್ಲದ ಕೆಲಸದೊತ್ತಡದಲ್ಲಿ ಕ್ಯಾನ್ಸರ್ ನ ಆರಂಭಿಕ ಗುಣಲಕ್ಷಣಗಳನ್ನು ನಿರ್ಲಕ್ಷಿಸಿದ್ದರೇ ಎನ್ನುವ ಪ್ರಶ್ನೆ ಅವರ ಆಪ್ತರನ್ನು ಕಾಡತೊಡಗಿದೆ. ಅನಂತ್ ಅವರ ಆರೋಗ್ಯದಲ್ಲಿ ಪದೇ ಪದೇ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರು ಅವುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ವಿವಿಧಕಾರ್ಯಭಾರಗಳನ್ನು ನಿರ್ವಹಿಸುವುದರಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎನ್ನುವ ಮಾಹಿತಿ ಹೊರಬಿದಿದ್ದೆ.
ಅನಂತ್ ಕುಮಾರ್ ಅವರಿಗೆ ಇತ್ತೀಚೆಗೆ ಅತಿಯಾದ ಕೆಮ್ಮು ಕಾಡುತ್ತಿದ್ದು, ಇದಕ್ಕೆ ವಿಧಾನಸಭೆ ಚುನಾವಣೆಯ ಒತ್ತಡವೇ ಕಾರಣ ಎಂದು ನಂಬಿದ್ದರು ಎನ್ನುತ್ತಾರೆ ಅನಂತಕುಮಾರ್ ಅವರ ಆತ್ಮೀಯ ಸ್ನೇಹಿತರೂ ಹಾಗೂ ಶಂಕರ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರೂ ಆಗಿರುವ ಡಾ.ಬಿ.ಎಸ್.ಶ್ರೀನಾಥ್.
ಅನಂತ್ ಕುಮಾರ್ ಅವರಿಗೆ ಶುಗರ್ ಒಂದನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಅರೋಗ್ಯ ಸಮಸ್ಯೆ ಇರಲಿಲ್ಲ ಅಥವಾ ಸ್ಮೋಕಿಂಗ್ ನಂತಹ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಅವರ ಬದುಕಿನ ಶೈಲಿಯೂ ಚೆನ್ನಾಗಿತ್ತು. ಆದರೆ ಶ್ವಾಸಕೋಶದ ಕ್ಯಾನ್ಸರ್ (ಅಡೆನೊಕಾರ್ಸಿನೊಮಾ) ಪತ್ತೆಯಾದ ಆರು ತಿಂಗಳಲ್ಲೇ ಅನಂತಕುಮಾರ್ ಅವರನ್ನು ವಿಧಿ ತನ್ನೆಡೆಗೆ ಸೆಳೆದುಕೊಂಡುಬಿಟ್ಟಿತ್ತು ಎನ್ನುತ್ತಾರೆ ಡಾ.ಬಿ.ಎಸ್.ಶ್ರೀನಾಥ್.
ಹೀಗಾಗಿ ಅವರಲ್ಲಿ ಕಂಡು ಬಂದ ರೋಗ ಲಕ್ಷಣವನ್ನು ಅನಂತ್ ಅಷ್ಟಾಗಿ ಗಣನೆಗೆ ತೆಗೆದುಕೊಂಡಿಲ್ಲವೇ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡತೊಡಗಿದೆ. ಅನಂತ್ ಅವರಿಗೆ ಜನವರಿ, ಫೆಬ್ರುವರಿ ತಿಂಗಳಲ್ಲೇ ಕ್ಯಾನ್ಸರ್ ಬಂದಿರಬಹುದಾದ ಸಾಧ್ಯತೆ ಇದೆ. ಆದರೆ ಅದು ಪತ್ತೆಯಾಗಿದ್ದು ಜೂನ್ ತಿಂಗಳಲ್ಲಿ .ಆದರೆ ಸಮಯ ಮೀರಿತ್ತು ಕ್ಯಾನ್ಸರ್ ರೋಗ ಆಗಲೇ ಗಂಭೀರ ಸ್ವರೂಪ ಪಡೆದು ಕೊನೆಯ ಹಂತ ತಲುಪಿತ್ತು. ಕ್ಯಾನ್ಸರ್ ಅವರಿಸಿದೆ ಎಂದಾಗ ಅನಂತ್ ಅಘಾತಕ್ಕೆ ಒಳಗಾಗಿದ್ದರು. ಅಡ್ವಾನ್ಡ್ ಸ್ಟೇಜ್ ನಲ್ಲಿದ್ದ ಕ್ಯಾನ್ಸರ್ ಅವರನ್ನು ಚೇತರಿಸಿಕೊಳ್ಳಲು ಬಿಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯೂಯಾರ್ಕ್ನ ಮೆಮೊರಿಯಲ್ ಸ್ಲೋನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಅನಂತಕುಮಾರ್ ಮುಂದಾದರು ಆದರೆ ಅಲ್ಲಿನ ಚಿಕಿತ್ಸೆ ಅವರ ಮೇಲೆ ಅಡ್ಡ ಪರಿಣಾಮ ಬೀರಿತ್ತು. ಹೀಗಾಗಿ ಬೆಂಗಳೂರಿಗೆ ಮರಳಿ ಇಲ್ಲಿಯೇ ಚಿಕಿತ್ಸೆ ಮುಂದುವರಿಸಿದರು. ಆದರೆ ಈ ವಿಚಾರವೆಲ್ಲವನ್ನು ಬಾಹ್ಯ ಪ್ರಪಂಚಕ್ಕೆ ತಿಳಿಸಬಾರದು ಎಂದಿದ್ದರು. ಆರೋಗ್ಯದ ಸಮಸ್ಯೆಯನ್ನು ಖಾಸಗಿಯಾಗಿಯೇ ಇರಿಸಬೇಕು ಎಂದು ಅವರು ಹಾಗೂ ಅವರ ಕುಟುಂಬ ಆಶಿಸಿದ್ದರು ಎನ್ನುತ್ತಾರೆ ಅವರ ಆಪ್ತಮಿತ್ರ ಡಾ.ಶ್ರೀನಾಥ್.