ಬೆಂಗಳೂರು, ನ 12 (MSP): ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಎನ್ನುವ ಖ್ಯಾತಿ ಗಳಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಸವನಗುಡಿಯ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದೆಹಲಿಯಲ್ಲಿ ಕನ್ನಡ ಧ್ವನಿಯಾಗಿದ್ದ ಅನಂತ ಕುಮಾರ್ ಕರ್ನಾಟಕದ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಶಕ್ತಿಯಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸಿದವರಲ್ಲಿ ಅನಂತ್ ಅವರು ಕೂಡಾ ಒಬ್ಬರಾಗಿದ್ದರು.
ನಾರಾಯಣ ಶಾಸ್ತ್ರಿ ಹಾಗು ಗಿರಿಜಾ ಶಾಸ್ತ್ರಿ ದಂಪತಿಯ ಪುತ್ರರಾಗಿ ಜುಲೈ 22, 1959 ರಂದು ಜನಿಸಿದ ಅನಂತಕುಮಾರ್ ಅವರು ಡಾ. ತೇಜಸ್ವಿನಿ ಅವರನ್ನು ವರಿಸಿದ್ದರು. ಈ ದಂಪತಿಗೆ ಐಶ್ವರ್ಯ, ವಿಜೇತ ಎನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆಯಾಗಿದ್ದ ಎಬಿವಿಪಿ ಮೂಲಕ ಅನಂತಕುಮಾರ್ ಅವರು ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ್ದರು. ಆರ್ ಎಸ್ ಎಸ್ ಸಿದ್ಧಾಂತಕ್ಕೆ ನಿಷ್ಠರಾಗಿದ್ದ ಅನಂತ ಕುಮಾರ್ ಎಲ್ಲರೊಂದಿಗೆ ಸ್ನೇಹದಿಂದಲೇ ಬೆರೆಯುತ್ತಿದ್ದರು. ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಅನಂತಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿ 30 ದಿನಗಳ ಸೆರೆಮನೆವಾಸ ಕೂಡಾ ಅನುಭವಿಸಿದ್ದರು.
ಹುಬ್ಬಳ್ಳಿಯ ಕೆ.ಎಸ್.ಕಲಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಜೆ.ಎಸ್.ಎಸ್.ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದ ಅವರು ಎಬಿವಿಪಿ ರಾಜ್ಯ ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 1987ರಲ್ಲಿ ಬಿಜೆಪಿ ಸೇರಿದ್ದ ಅನಂತಕುಮಾರ್ ಕರ್ನಾಟಕ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1996ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದ, ಅನಂತಕುಮಾರ್ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಮಾನಯಾನ ಖಾತೆ ಸಚಿವರಾಗಿದ್ದರು.
ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಣಿಸಿಕೊಂಡಿರುವ ಅನಂತ್ ಕುಮಾರ್ ಅಗ್ಗದ ದರದ ಜನೌಷಧಿಯ ರೂವಾರಿ ಕೂಡಾ ಹೌದು. ಇವರು ರಸಗೊಬ್ಬರ, ಔಷಧ ಮಾಫಿಯಾದಿಂದ ಪ್ರಾಣ ಬೆದರಿಕೆಯನ್ನು ಕೂಡಾ ಎದುರಿಸಿದ್ದರು.