ಬೆಂಗಳೂರು, ನ 12(SM): ಕೇಂದ್ರ ಸಚಿವ ಹಾಗೂ ಬಿಜೆಪಿಯ ನಾಯಕ ಅನಂತ್ ಕುಮಾರ್(59) ಅವರು ನವೆಂಬರ್ 12ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ, ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.ಅನಾರೋಗ್ಯದ ಕೊನೇಯ ಹಂತದಲ್ಲಿ ಲಂಡನ್ನಿಗೆ ತೆರಳಿ ಅವರು ಚಿಕಿತ್ಸೆ ಪಡೆದಿದ್ದರು. ನಿರಂತರ ಚಿಕಿತ್ಸೆ ನಡೆಸಿದರೂ ಅಂತಿಮವಾಗಿ ಫಲಕಾರಿಯಾಗದೆ, ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆದಂತಹ ವಿಧಾನಸಭೆ ಚುನಾವಣೆಗೂ ಮುನ್ನವೇ ಕ್ಯಾನ್ಸರ್ ಉಲ್ಬಣಗೊಂಡಿತ್ತು. ಸಂದರ್ಶನ ನೀಡಲು ಕಷ್ಟವಾಗುತ್ತಿದ್ದರೂ, ನಗುಮೊಗದಿಂದಲೇ ಮಾತನಾಡುತ್ತಿದ್ದರು. ತಮ್ಮೆಲ್ಲ ನೋವನ್ನು ಮರೆತು ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಅಷ್ಟರಲ್ಲಾಗಲೇ ಕ್ಯಾನ್ಸರ್ ಅಂತಿಮ ಘಟ್ಟಕ್ಕೆ ತಲುಪಿತ್ತು.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅನಂತ ಕುಮಾರ್, ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದರು.
ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ಅದಮ್ಯ ಚೇತನ ಸಂಸ್ಥೆಯ ರೂವಾರಿ ಡಾ. ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತಾ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅನಂತ್ ಕುಮಾರ್ ಅವರು ದೇಹವನ್ನು ಜಯನಗರದಲ್ಲಿರುವ ಅವರ ನಿವಾಸ 'ಸುಮೇರು'ಗೆ ತೆಗೆದುಕೊಂಡು ಹೋಗಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ರ ಸುಮಾರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಜಯನಗರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಗಂಟೆಗೆ ಅನಂತ್ ಕುಮಾರ್ ಅವರ ದೇಹವನ್ನು ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ದೇಶದ ಇತರ ನಾಯಕರು ಕೂಡ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ.