ವಿಟ್ಲ, ನ 11(SM): ಮಹಿಳೆಯೊಬ್ಬರು ಸ್ವಸಹಾಯ ಗುಂಪಿನ ಹಣ ಕಟ್ಟಿ ಹಿಂತಿರುಗುತ್ತಿದ್ದ ವೇಳೆ ಯುವಕನೋರ್ವ ಮಹಿಳೆಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತೇನೆ ಎಂದು ಬೆದರಿಸಿ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಶ್ರಪ್ ಮಾನಭಂಗಕ್ಕೆ ಯತ್ನಿಸಿದ ಆರೋಪಿ.
ಕೊಳ್ನಾಡು ಗ್ರಾಮದ ಸೇರ್ಕಳ ನಿವಾಸಿ ಸುಂದರ ಬೈರ ಎಂಬವರ ಪತ್ನಿಯ ಮಾನಭಂಗಕ್ಕೆ ಆರೋಪಿ ಯತ್ನಿಸಿದ್ದಾನೆ. ನ.9ರಂದು ಸ್ವಸಹಾಯ ಗುಂಪಿನ ಹಣವನ್ನು ಕಟ್ಟಲು ತೆರಳುತ್ತಿದ್ದ ವೇಳೆ ಪಡಾರು ಎಂಬಲ್ಲಿ ಬೈಕಿನಲ್ಲಿ ಬಂದ ಕೊಳ್ನಾಡು ಗ್ರಾಮದ ಕಲ್ಲಮಜಲು ಸಮೀಪದ ಬಾರೆಬೆಟ್ಟು ಮದಕ ನಿವಾಸಿ ರಮ್ಲ ಬ್ಯಾರಿಯವರ ಪುತ್ರ ಅಶ್ರಪ್ ಎಂಬಾತ ಮಹಿಳೆಯನ್ನು ತಡೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.
ಅಲ್ಲದೆ, ನಿನ್ನ ಗಂಡನ ಮೊಬೈಲ್ ಸಂಖ್ಯೆ ನೀಡು ಎಂದು ಹೇಳಿ ನಿನ್ನ ಅಶ್ಲೀಲ ಭಾವಚಿತ್ರಗಳು ನನ್ನ ಬಳಿ ಇದೆ, ನಾನು ಹೇಳಿದ ಹಾಗೆ ನೀನು ಕೇಳದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಹೇಳಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ನಾನು ಬೊಬ್ಬೆ ಹಾಕಿ ನನ್ನ ಗಂಡನಿಗೆ ಕರೆ ಮಾಡುತ್ತಿದ್ದಂತೆ ಆತ ಪರಾರಿಯಾದ ಎಂದು ಮಹಿಳೆ ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.