ಬೆಂಗಳೂರು, ನ 11(SM): ಬೀದಿ ಬದಿ ವ್ಯಾಪಾರಸ್ಥರು ಮತ್ತು ಸಣ್ಣ ವ್ಯಾಪಾರಿಗಳ ಪುನಶ್ಚೇತನಕ್ಕೆ ರಾಜ್ಯದ ಕುಮಾಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಮುಂದಾಗಿದೆ. ಬಡ್ಡಿ ರಹಿತ ಸಾಲ ನೀಡಲು ಮೊಬೈಲ್ ಬ್ಯಾಂಕ್ ಸ್ಥಾಪನೆ ಮಾಡುವ ಯೋಜನೆಯೊಂದಕ್ಕೆ ಸರಕಾರ ಚಿಂತನೆ ನಡೆಸಿದೆ. ಈ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನವೆಂಬರ್ 22ರಂದು ಚಾಲನೆ ನೀಡಲಿದ್ದಾರೆ.
ನವೆಂಬರ್ 22ರಂದು ಮೊಬೈಲ್ ಬ್ಯಾಂಕ್ ಉದ್ಘಾಟನೆಯಾಗಲಿದ್ದು, 'ಬಡವರ ಬಂಧು' ಎಂಬ ಹೆಸರಿನಲ್ಲಿ ಸಣ್ಣ ವ್ಯಾಪಾರಿಗಳಿಗೆ 10,000 ರೂ. ಬಡ್ಡಿ ರಹಿತ ಸಾಲ ಈ ಯೋಜನೆಯ ಮೂಲಕ ಸಿಗಲಿದೆ. ಸಾಲ ಪಡೆದ ಫಲಾನುಭವಿಗಳು ದಿನಕ್ಕೆ 100 ರೂ. ಅಥವಾ ನೂರು ದಿನದಲ್ಲಿ ಸಂಪೂರ್ಣ ಹಣವನ್ನು ವಾಪಸ್ ಮಾಡಬಹುದು. ಸಣ್ಣ ವ್ಯಾಪಾರಿಗಳನ್ನು ಬಡ್ಡಿದಂಧೆ ನಡೆಸುವ ಜನರಿಂದ ಕಾಪಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ನವೆಂಬರ್ 22ರಂದು ಬೆಂಗಳೂರು ನಗರದಲ್ಲಿ 3 ಮೊಬೈಲ್ ಬ್ಯಾಂಕ್ಗಳನ್ನು ಆರಂಭ ಮಾಡಲಾಗುತ್ತದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಒಂದು ಮೊಬೈಲ್ ಯೂನಿಟ್ ಆರಂಭಗೊಳ್ಳಲಿದೆ.
ಮೊದಲ ಹಂತದಲ್ಲಿ 53,000 ಫಲಾನುಭವಿಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿಯೇ 5 ಸಾವಿರ ಫಲಾನುಭವಿಗಳಿದ್ದಾರೆ.