ಬೆಂಗಳೂರು, ನ 11(SM): ಆಂಬಿಡೆಂಟ್ ಪ್ರಕರಣದಲ್ಲಿ ಇಡಿಗೆ ಲಂಚ ಕೊಟ್ಟ ಆರೋಪದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಕೋರ್ಟ್ ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದ ಸಿಸಿಬಿ ವಿಶೇಷ ತಂಡ ಕೋರಮಂಗಲದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಜನಾರ್ದನ ರೆಡ್ಡಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ನಿರಂತರ ಹುಡುಕಾಟದ ಬಳಿಕ ವಿಚಾರಣೆಗೆಂದು ಹಾಜರಾದ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ರೆಡ್ಡಿ ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನವೆಂಬರ್ 24ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಾಗಿದೆ. ವಕೀಲ ಹನುಮಂತರಾಯಪ್ಪ ಅವರು ರೆಡ್ಡಿ ಪರ ವಾದ ಮಂಡಿಸಿದರಾದರೂ ಅವರ ಜಾಮೀನು ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.