ಬೆಂಗಳೂರು, ನ 11 (MSP): ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಯಲ್ಲಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ರೆಡ್ಡಿಗೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಇವರಲ್ಲದೆ ಪ್ರಕರಣದ ಪ್ರಮುಖ ಆರೋಪಿಗಳಾದ ಆ್ಯಂಬಿಡೆಂಟ್ ಕಂಪನಿ ಮಾಲಕರಾದ ಸೈಯದ್ ಅಹಮ್ಮದ್ ಫರೀದ್ ಮತ್ತು ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಅವರನ್ನು ಸಿಸಿಬಿ ಪೊಲೀಸರು ತಡರಾತ್ರಿವರೆಗೂ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ಮುಗಿಯುತ್ತಿದ್ದಂತೆ, ಸಿಸಿಬಿ ಪೊಲೀಸರು ಬಂಧನಕ್ಕೆ ಸಿದ್ದತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಸದ್ಯ ರೆಡ್ಡಿಯವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸಂಜೆ 4 ಗಂಟೆಗೆ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈ ವೇಳೆ 14 ದಿನಗಳ ಕಾಲ ಸಿಸಿಬಿ ವಶ ಕೋರಲಿದ್ದಾರೆ. ಅದಕ್ಕೂ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಮುಂದೆ ಹಾಜರಾಗಲು ನ್ಯಾಯಾಲಯ ಶುಕ್ರವಾರದಂದು ನೀಡಿದ್ದ ಖಡಕ್ ಸೂಚನೆಯನ್ನು ಚಾಚುತಪ್ಪದೆ ಪಾಲಿಸಿದ ರೆಡ್ಡಿ, ವಕೀಲ ಚಂದ್ರಶೇಖರ್ ಅವರ ಕಾರಿನಲ್ಲೇ ಬಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.