ತಿರುವನಂತಪುರ,ನ 11 (MSP): ಶಬರಿ ಮಲೆ ದೇಗುಲಕ್ಕೆ ಎಲ್ಲ ವಯೋ ಮಿತಿಯ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಕೇರಳ ಪೊಲೀಸ್ ಇಲಾಖೆ ಮಿಲಿಟರಿ ಹೆಲಿ ಕಾಪ್ಟರ್ಗಳ ಬಳಕೆಗೆ ನಿರ್ಧರಿಸಿದೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.ಹೀಗಾಗಿ ಮತ್ತೊಂದು ಸಂಘರ್ಷಕ್ಕೆ ಶಬರಿಮಲೆ ಸಾಕ್ಷಿಯಾಗುತ್ತಾ ಎನ್ನುವ ಅನುಮಾನಗಳು ಕಾಡತೊಡಗಿದೆ.
ಸಂಪ್ರದಾಯ ಮತ್ತು ಕಾನೂನಿನ ನಡುವಿನ ಸಂಘರ್ಷದಿಂದಾಗಿ ಇಡೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ, ಮತ್ತೊಂದು ಐತಿಹಾಸಿಕ ಹೋರಾಟ ಮತ್ತು ಸಂಘರ್ಷಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆ ಗೋಚರಿಸಿದೆ. ಇದೇ ನ.೧೬ ರಿಂಡ ನಡೆಯಲಿರುವ ವಾರ್ಷಿಕ ಯಾತ್ರೆ ಮತ್ತು ದೇವರ ದರ್ಶನಕ್ಕಾಗಿ ಈಗಾಗಲೇ ೩ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು,ಈ ಪೈಕಿ ೧೦-೫೦ ನಡುವಿನ ವಯೋಮಾನದ ೫೬೦ ಮಹಿಳೆಯರು ಸೇರಿದ್ದಾರೆ.
ನ.17ರಿಂದ 41 ದಿನಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಂದರ್ಭಕ್ಕೆ ದೇಗುಲ ತೆರೆಯಲಿರುವಂತೆಯೇ ಹೆಲಿಕಾಪ್ಟರ್ ಬಳಕೆಯ ಸಾಧ್ಯತೆ ಬಗ್ಗೆ ಕೇರಳ ಪೊಲೀಸ್ ಇಲಾಖೆ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ. ಕೇರಳ ಅರಣ್ಯ ಇಲಾಖೆ ಅನು ಮೋದನೆ ನೀಡಬೇಕಾಗಿದ್ದು, ಅದಕ್ಕಾಗಿ ಕಾಯಲಾಗುತ್ತಿದೆ ಎನ್ನ ಲಾಗಿದೆ. 1980ರ ದಶಕದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕಾಪ್ಟರ್ ಮೂಲಕ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಕಾರಣಾಂತರ ಗಳಿಂದ ಇದು ಸಾಧ್ಯವಾಗಿರಲಿಲ್ಲ. ಅಂದಿನಿಂದ ಇಂದಿನಿಂದ ಈ ಹೆಲಿಪ್ಯಾಡ್ ಬಳಕೆಯಾಗಿರಲಿಲ್ಲ. ಈ ಹೆಲಿಪ್ಯಾಡ್ ನ್ನು ಮತ್ತೆ ಹಾರಾಟಕ್ಕೆ ಅಣಿಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಅದಕ್ಕಾಗಿ ಅರ್ಜಿ ಸಲ್ಲಿಸುವ ಯೋಚನೆಯಲ್ಲಿದ್ದಾರೆ ಪೊಲೀಸರು. . ಇದಲ್ಲದೆ ಹೆಲಿಪ್ಯಾಡ್ ನಿಂದ ಮಹಿಳಾ ಭಕ್ತರನ್ನು ದೇವಸ್ಥಾನಕ್ಕೆ ಕರೆದೊಯ್ಯುವುದು ಕೂಡಾ ಸವಾಲಿನ ಕೆಲಸವಾದ ಕಾರಣ ಈ ಬಗ್ಗೆ ಭದ್ರತೆ ಹಾಗೂ ಇತರ ವ್ಯವಸ್ಥೆ ಹೇಗಿರಬೇಕು ಎಂದು ಪೊಲೀಸ್ ಇಲಾಖೆ ಸಮಾಲೋಚನೆಯಲ್ಲಿ ನಿರತವಾಗಿದೆ.