ಮಂಗಳೂರು ಅ13:"ಪವಿತ್ರ ಕುರಾನ್ ಕೇವಲ ಮುಸ್ಲಿಂಮರಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಲ್ಲಾಹು ಕೊಟ್ಟ ಪಾವನವಾದ ಗ್ರಂಥವಾಗಿದೆ.ಮುಸ್ಲಿಂಮರಂತೂ ಇದರ ಅವಹೇಳನವನ್ನು ಯಾವ ಕಾರಣಕ್ಕೂ ಸಹಿಸಲಾರರು.ಸಮಾಜದಲ್ಲಿ ನಡೆಯುವ ಪ್ರತಿಯೊಂದು ಕೆಟ್ಟ ಘಟನೆಗಳಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ವಿನಾ:ಕಾರಣ ಸಂಬಂಧ ಕಲ್ಪಿಸುವ ಕಾರ್ಯವು ಕೆಲ ಸಮಯದಿಂದ ನಡೆಯುತ್ತಿದೆ. ಈ ವರೆಗೂ ಸುಮ್ಮನಿದ್ದ ಈ ಸಮುದಾಯವು ಇದನ್ನು ಇನ್ನೂ ಸಹಿಸಿಕೊಂಡು ಬದುಕುವುದರಲ್ಲಿ ಅರ್ಥವಿಲ್ಲ. ಸಹನೆಗೂ ಒಂದು ಮಿತಿಯಿದೆ.ಬಂಟ್ವಾಳದಲ್ಲಿ ಪೋಲಿಸ್ ಅಧಿಕಾರಿಗಳು ಪವಿತ್ರ ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ್ದಾರೆ. ಪೋಲಿಸ್ ಇಲಾಖೆ ಹಾಗೂ ಆಡಳಿತ ಈ ಘಟಣೆಯಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳದೆ ನಮ್ಮ ತಾಳ್ಮೆ ಪರೀಕ್ಷಿಸುವ ಕಾಯಕದಲ್ಲಿ ತೊಡಗಿದೆ.ಇದನ್ನು ತಕ್ಷಣ ನಿಲ್ಲಿಸಿ ಇಲ್ಲವಾದಲ್ಲಿ ಕಾನೂನಿನ ಚವ್ಕಟ್ಟಿನೊಳಗೆ ನಿಂತು ಕಠಿಣ ಹೋರಾಟಗಳನ್ನು ಮಾಡಲು ನಾವು ಹಿಂಜರಿಯೆವು" ಎಂದು ರಾಜ್ಯ ಯುವ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಗುಡುಗಿದ್ದಾರೆ.
ಅವರು ಇಂದು ಮಂಗಳೂರು ನೆಹರು ಮೈದಾನದಲ್ಲಿ ಕಳೆದ ತಿಂಗಳು ಬಂಟ್ವಾಳದ ಮನೆಯೊಂದರಲ್ಲಿ ಪೋಲಿಸರಿಂದ ಕುರಾನ್ ಗ್ರಂಥಕ್ಕೆ ಆದ ಅವಮಾನದ ಖಂಡಿಸಿ ದ.ಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಅಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾನಾಡುತ್ತಿದ್ದರು.
"ಸ್ವಂತ ಸಮುದಾಯಕ್ಕೆ ಅನ್ಯಾಯವಾದಾಗ ಧಾರ್ಮಿಕ ವಿಚಾರಗಳಲ್ಲಿನ ಭಿನ್ನತೆಗಳನ್ನು ಬದಿಗಿಟ್ಟು ಮುಸ್ಲಿಂ ಸಮುದಾಯವು ಒಂದಾಗಬೇಕು.ನ್ಯಾಯ ದೊರಕದ ಸಂಧರ್ಭಗಳಲ್ಲಿ ಒಗ್ಗಟ್ಟಿನ ಹೋರಾಟದೊಂದಿದೆ ಅದನ್ನು ಪಡೆಯುವುದರ ಕಾಯಕದಲ್ಲಿ ತೊಡಗಬೇಕು.ಮುಸ್ಲಿಂ ಭಾಂದವರು ಒಂದಾಗಿ ಅನ್ಯಾಯದ ವಿರುಧ ಸೆಟೆದು ನಿಂತರೆ ಯಾವ ವಿನಾ:ಕಾರಣ ಸಮುದಾಯವನ್ನು ದೂಷಿಸುವ ಧೈರ್ಯವನ್ನು ಯಾರೂ ಮಾಡಲಾರರು ಎಂದು ಅವರು ನುಡಿದರು.
ಮವ್ಲಾನ ಜಾಫರ್ ಸಾಧಿಕ್ ಫೈಝಿ, ಮಾಜಿ ಮೇಯರ್ ಕೆ.ಅಶ್ರಫ್ , ಅಶ್ರಫ್ ಕಿನಾರ,ಹಮೀದ್ ಕಂದಕ್,ಅಜೀಜ್ ಕುದ್ರೋಳಿ ಹಾಗೂ ಮುಸ್ಲಿಂ ಸಮುದಾಯದ ಜಿಲ್ಲಾ ಮುಖಂಡರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ನಾನಾ ಭಾಗಗಳಿಂದ ಬಂದ ಮುಸ್ಲಿಂ ಭಾಂದವರು ಆಡಳಿತ ಹಾಗೂ ಪೋಲಿಸ್ ವೈಫಲ್ಯದ ಕುರಿತು ಘೋಷಣೆ ಕೂಗಿದರು.