ಮಂಗಳೂರು, ಅ.06 (DaijiworldNews/PY): ದ. ಕ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ದೇವಾಲಯಗಳಿಗೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬೋರ್ಡ್ ಹಾಕಿವೆ.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಕಡ್ಡಾಯ ಎನ್ನುವ ಬೋರ್ಡ್ ಹಾಕಲಾಗಿದೆ.
ದ.ಕ ಜಿಲ್ಲೆಯ ದೇವಾಲಯಗಳಲ್ಲಿ ಕೇರಳ ರೀತಿಯಲ್ಲಿಯೇ ವಸ್ತ್ರಸಂಹಿತೆ ಜಾರಿ ಮಾಡಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಭಕ್ತರು ವಸ್ತ್ರ ಧರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಹಿನ್ನೆಲೆ ಸಂಘಟನೆಗಳು ಈ ಬೋಡ್ ಹಾಕಿವೆ.
ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಬಹುದು, ಪುರುಷರು ಧೋತಿ, ಪಂಚೆ ಅಥವಾ ಪ್ಯಾಂಟ್ ಧರಿಸಿ ದೇವಸ್ಥಾನಕ್ಕೆ ಬರಬೇಕು ಎನ್ನುವ ನಿಯಮ ಹಾಕಲಾಗಿದೆ.
ಈ ಕುರಿತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಪ್ರತಿಕ್ರಿಯೆ ನೀಡಿದ್ದು, "ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎನ್ನುವುದು ನಮ್ಮೆಲ್ಲರ ಅಭಿಪ್ರಾಯ. ಸರ್ಕಾರ ಈ ಬಗ್ಗೆ ನಿಯಮ ರೂಪಿಸಬೇಕು. ಈ ವಿಚಾರವಾಗಿ ಇಲಾಖೆಯಿಂದ ಸಭೆ ನಡೆದಿದ್ದು, ಶೀಘ್ರವೇ ವಸ್ತ್ರಸಂಹಿತೆ ಜಾರಿಯಾಗುವ ವಿಶ್ವಾಸ ಇದೆ" ಎಂದು ಹೇಳಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡಾ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬೋರ್ಡ್ ಹಾಕಲಾಗಿದೆ. ಹಾಗಾಗಿ ಭಕ್ತರು ಗೊಂದಲದಲ್ಲಿದ್ದಾರೆ. ಈ ಕುರಿತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಸ್ಪಷ್ಟನೆ ನೀಡಿದ್ದು, "ಸರ್ಕಾರ ಅಥವಾ ಧಾರ್ಮಿಕ ದತ್ತಿ ಇಲಾಖೆ ವಸ್ತ್ರಸಂಹಿತೆಯನ್ನು ಇನ್ನೂ ಜಾರಿ ಮಾಡಿಲ್ಲ. ಆದರೆ, ಭಕ್ತರ ಹಿತರಕ್ಷಣೆಗಾಗಿ ಬ್ಯಾನರ್ ಹಾಕಿದ್ದೇವೆ. ಇದು ಕಡ್ಡಾಯವಲ್ಲ"ಎಂದು ತಿಳಿಸಿದ್ದಾರೆ.